ಬೆಂಗಳೂರು:ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಸಂಘಟನೆ ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿರುವ ಹೈಕೋರ್ಟ್, ಕಾನೂನು ಬಾಹಿರ ಚಟುವಟಿಕೆಗಳ (ತಡೆ ಕಾಯಿದೆ) 1967ರ (ಯುಎಪಿಎ) ಪ್ರಕಾರ ಯಾವುದೇ ಸಂಸ್ಥೆಯನ್ನು ತಕ್ಷಣಕ್ಕೆ ಜಾರಿಯಾಗುವಂತೆ ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ ಎಂದು ತಿಳಿಸಿದೆ.
ಪಿಎಫ್‌ಐ ರದ್ದು ಮಾಡಿರುವುದನ್ನು ಪ್ರಶ್ನಿಸಿ ಬೆಂಗಳೂರಿನ ನಿವಾಸಿ ನಾಸಿರ್ ಪಾಷಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಸರ್ಕಾರ, ಸಂಘಟನೆಯು ಕಾನೂನು ಬಾಹಿರ ಎಂದು ಕಾಯಿದೆಯ ಸೆಕ್ಷನ್ 3ರಲ್ಲಿ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದೆ.
ಜೊತೆಗೆ, ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡಿರುವ ವಿಚಾರ ಸಂಬಂಧಪಟ್ಟ ಪ್ರಕರಣ ಯುಎಪಿಎ ಅಡಿ ರಚನೆ ಮಾಡಿರುವ ನ್ಯಾಯಾಧೀಕರಣದ ಮುಂದಿದೆ. ಹೀಗಿದ್ದಾಗ, ನಿಷೇಧವನ್ನು ತಕ್ಷಣದಿಂದ ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸದ್ಯ ನ್ಯಾಯಾಲಯ ಪರಿಶೀಲಿಸಬೇಕಿದೆ. ಅದರಂತೆ, ನಿಷೇಧವನ್ನು ತಕ್ಷಣದಿಂದ ಜಾರಿಗೆ ತಂದಿರುವುದನ್ನು ಡಾ. ಜಾಕಿರ್ ನಾಯ್ಕ್ ಅವರ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ (ಐಆರ್‌ಎಸ್) ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಸುಪ್ರೀಂಕೋರ್ಟ್ ಮಹಮ್ಮದ್ ಜಾಫರ್ ಪ್ರಕರಣದಲ್ಲಿ ಪರಿಗಣಿಸಿರುವುದನ್ನು ನ್ಯಾಯಪೀಠವು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಅಲ್ಲದೇ ಸಂವಿಧಾನದ ಅನುಚ್ಛೇದ 19(1) (ಸಿ) ಅಡಿಯಲ್ಲಿ ದೊರಕುವ ಹಕ್ಕು ಮತ್ತು ಸ್ವಾತಂತ್ರ್ಯ ಅನುಚ್ಛೇದ 19(4)ನ್ನು ಅವಲಂಬಿಸಿದೆ. ದೇಶದ ಸಮಗ್ರತೆ ಹಾಗೂ ಐಕ್ಯತೆಗೆ ಧಕ್ಕೆ ಬರುವ ಸಂದರ್ಭಗಳಿದ್ದಾಗ ಕೆಲವು ನಿರ್ಬಂಧಗಳನ್ನು ಹೇರಬಹುದು. ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ನಿಷೇಧಕ್ಕೆ ಕಾರಣಗಳನ್ನು ಆಧಾರ ಸಹಿತವಾಗಿ ಕೊಡಲಾಗಿದೆ. ಹಾಗಾಗಿ, ಕೇಂದ್ರ ಸರ್ಕಾರದ ಅಧಿಸೂಚನೆಯಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ.