ಬೆಂಗಳೂರು : ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗೋಮಾಳ ಜಮೀನಿನಲ್ಲಿ ಶ್ರೀ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಯೋಜನೆ ಕೈಬಿಡಬೇಕು, ಯೋಜನೆಯಲ್ಲಿನ ಅಕ್ರಮಗಳ ತನಿಖೆಗೆ ಸಮಿತಿ ರಚನೆ ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಕೈಗೆತ್ತಿಕೊಂಡಿತು.
ಅರ್ಜಿದಾರರು ಸಾಕಷ್ಟು ವಿಳಂಬವಾಗಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿಯಲ್ಲಿನ ಎಲ್ಲ ಅಂಶಗಳು ಅರ್ಜಿದಾರರ ಊಹೆಯಂತಿವೆ. ಸ್ವಂತ ಅಭಿಪ್ರಾಯದ ಮೂಟೆ ಆಗಿದೆ. ಇದೊಂದು ಸಾರಾಸಗಟಾಗಿ ತಳ್ಳಿಹಾಕುವಂತಹ ಅರ್ಜಿ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಈಗಾಗಲೇ ಥೀಮ್ ಪಾರ್ಕ್ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಈ ಹಿಂದೆ ಯಾವತ್ತೂ ಆಕ್ಷೇಪವೆತ್ತದ ಅರ್ಜಿದಾರರು ಈಗ ಏಕಾಏಕಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಷ್ಟಕ್ಕೂ ಅರ್ಜಿದಾರರು ಸ್ಥಳೀಯರಲ್ಲ. ಸ್ಥಳೀಯ ಗ್ರಾಮಸ್ಥರು ಕೋರ್ಟ್‌ಗೆ ಯಾಕೆ ಬಂದಿಲ್ಲ. ಗೋಮಾಳ ಜಾಗವನ್ನು ಥೀಮ್ ಪಾರ್ಕ್‌ಗೆ ಬಳಕೆ ಮಾಡಲಾಗುತ್ತಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಆದರೆ, ಇದರಿಂದ ಪಶುಸಂಗೋಪನೆಗೆ ತೊಂದರೆ ಆಗಲಿದೆ ಎಂದು ಗ್ರಾಮಸ್ಥರಾಗಲಿ ಅಥವಾ ನೆರೆಯ ಗ್ರಾಮಸ್ಥರು ಯಾರೂ ಆತಂಕ ವ್ಯಕ್ತಪಡಿಸಿಲ್ಲ. ಅರ್ಜಿಯಲ್ಲಿ ವಿಚಾರಣೆಗೆ ಪರಿಗಣಿಸುವಂತದ್ದೇನೂ ಇಲ್ಲ. ಅಲ್ಲದೇ ಬಹಳ ತಡವಾಗಿ ಅರ್ಜಿದಾರರು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿತು.
ಗೋವುಗಳನ್ನು ಸಾಕದವರು, ಗೋಮಾಳ ರಕ್ಷಣೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವೇ ಇಲ್ಲ. ಅರ್ಜಿದಾರರು ಗೋವುಗಳನ್ನು ಸಾಕಿದ್ದಾರೆಯೇ ಎಂದು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು ಅರ್ಜಿದಾರರನ್ನು ಮೌಖಿಕವಾಗಿ ಪ್ರಶ್ನಿಸಿದರು.