ಬೆಂಗಳೂರು: ಮಾಜಿ ಸಚಿವ, ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಮತ್ತು ಲೋಕಾಯುಕ್ತ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದು ಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಇದರಿಂದ, ಶಾಸಕ ರೇಣುಕಾಚಾರ್ಯರಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ಪ್ರಕರಣ ರದ್ದತಿ ಕೋರಿ ರೇಣುಕಾಚಾರ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠ ಅರ್ಜಿ ವಜಾ ಮಾಡಿ ಆದೇಶಿಸಿತು. ವಿಚಾರಣೆ ವೇಳೆ ಲೋಕಾಯುಕ್ತ ಪರ ವಕೀಲ ಬಿ.ಎಸ್.ಪ್ರಸಾದ್ ವಾದ ಮಂಡಿಸಿ, "ಪ್ರಕರಣ ಸಂಬಂಧ ರೇಣುಕಾಚಾರ್ಯ ವಿರುದ್ಧ 2015 ರಲ್ಲಿ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ನಂತರ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಿದ್ಧಪಡಿಸಿದ್ದಾರೆ. ಆದರೆ, ಅರ್ಜಿದಾರರು ಜನಪ್ರತಿನಿಧಿಯಾಗಿದ್ದಾರೆ. ಅಂತಿಮ ವರದಿ ಸಲ್ಲಿಕೆಗಾಗಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದು ಅಗತ್ಯ. ಸಕ್ಷಮ ಪ್ರಾಧಿಕಾರವಾದ ಸ್ಪೀಕರ್ ಅವರಲ್ಲಿ ಅನುಮತಿ ಕೋರಲಾಗಿದೆ. ಅವರು ಅನುಮತಿ ನೀಡಿದ ಕೂಡಲೇ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು. ಈ ಹಂತದಲ್ಲಿ ಪ್ರಕರಣದ ಎಫ್‌ಐಆರ್ ರದ್ದುಪಡಿಸಬಾರದು" ಎಂದು ಕೋರಿದ್ದರು. ಈ ಮನವಿ ಪುರಸ್ಕರಿಸಿರುವ ಹೈಕೋರ್ಟ್, ರೇಣುಕಾಚಾರ್ಯ ಅವರ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಇದನ್ನೂ ಓದಿ :ಅನಧಿಕೃತವಾಗಿ ಗೈರಾದವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗದಿದ್ದಾಗ ವೇತನ ಪಾವತಿಸಬೇಕು: ಹೈಕೋರ್ಟ್
ಪ್ರಕರಣದ ಹಿನ್ನೆಲೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತು ಅವರ ಸಹೋದರರ ವಿರುದ್ಧ ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ಗುರುಪಾದಯ್ಯ ಮಠದ್ ಎಂಬುವರು ದಾವಣಗೆರೆಯ ಲೋಕಾಯುಕ್ತ ನ್ಯಾಯಾಲಯಕ್ಕೆ 2015 ರ ಏಪ್ರಿಲ್ 28 ರಂದು ಖಾಸಗಿ ದೂರು ಸಲ್ಲಿಸಿದ್ದರು. ಪ್ರಕರಣದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ದಾವಣಗೆರೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ನ್ಯಾಯಾಲಯ ಆದೇಶಿಸಿತ್ತು.