ಬೆಂಗಳೂರು: ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ವಿಳಂಬವಾಗಲಿದೆ. ಹಾಗಾಗಿ ಆರೋಪಿಗೆ ಜಾಮೀನು ನೀಡಬೇಕು ಎಂಬ ವಾದವನ್ನು ತಳ್ಳಿಹಾಕಿರುವ ಹೈಕೋರ್ಟ್, ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಉಡುಪಿಯ ಹರೀಶ್ ರೆಡ್ಡಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಜಾನ್ ಮೈಕೆಲ್ ಕುನ್ಹ ಅವರಿದ್ದ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರನ ಪರ ವಕೀಲರು ವಾದಿಸಿ, ಮೊದಲಿಗೆ ಎಫ್ಐಆರ್ನಲ್ಲಿ ಹರಿಶ್ ರೆಡ್ಡಿ ಹೆಸರಿರಲಿಲ್ಲ. ಯಾವುದೇ ಸಾಕ್ಷ್ಯಾಧಾರವಿಲ್ಲದಿದ್ದರೂ ಮೊದಲನೇ ಆರೋಪಿಯ ಹೇಳಿಕೆ ಆಧರಿಸಿ ಅರ್ಜಿದಾರನನ್ನು ಬಂಧಿಸಲಾಗಿದೆ. ಕೊರೊನಾ ಸ್ಥಿತಿಯಿಂದಾಗಿ ವಿಚಾರಣಾ ನ್ಯಾಯಾಲಯದ ವಿಚಾರಣೆ ಶೀಘ್ರವಾಗಿ ನಡೆಯುವ ಸಾಧ್ಯತೆ ಇಲ್ಲ. ಅರ್ಜಿದಾರನಿಗೆ 70 ವರ್ಷದ ತಾಯಿ ಇದ್ದು, ಅವರನ್ನು ಆರೈಕೆ ಮಾಡಲು ಜಾಮೀನು ನೀಡಬೇಕು ಎಂದು ಕೋರಿದರು.