ಬೆಂಗಳೂರು : ಶಿರಾ ನಗರಸಭೆಯ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ ಸರ್ಕಾರ ನವೆಂಬರ್ 25ರಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಅಬ್ದುಲ್ಲಾ ಖಾನ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಪೀಠ ತನ್ನ ಆದೇಶದಲ್ಲಿ ಶಿರಾ ನಗರಸಭೆಯ ವಾರ್ಡ್ ಸಂಖ್ಯೆ 19ರ ಮೀಸಲಾತಿಯನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಕಳೆದ ಮೂರು ಅವಧಿಗಳಿಂದ ಈ ವಾರ್ಡ್‌ನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಈ ಬಾರಿ ಮೊದಲಿಗೆ ಬಿಸಿ (ಎ) ಇದ್ದುದನ್ನು ಅಂತಿಮ ಅಧಿಸೂಚನೆಯಲ್ಲಿ ಬಿಸಿಎ(ಮಹಿಳೆ)ಗೆ ಮೀಸಲಿಡಲಾಗಿದೆ. ಇದರಿಂದ ಮೀಸಲಾತಿ ಮಾರ್ಗಸೂಚಿ ಉಲ್ಲಂಘನೆ ಆಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಆದರೆ ಮೀಸಲಾತಿ ವಿಷಯದಲ್ಲಿ ಮಹಿಳೆ ಮೀಸಲು ಕೆಟಗರಿ ಅಲ್ಲ, ಅದೊಂದು ಲಿಂಗ ಸೂಚಕವಾಗುತ್ತದೆ. ಬಿಸಿಎ (ಮಹಿಳೆ) ಅಥವಾ ಸಾಮಾನ್ಯ (ಮಹಿಳೆ) ಎನ್ನುವುದು ಪ್ರತ್ಯೇಕ ಮೀಸಲು ಕೆಟಗರಿಗಳು. ಆದ್ದರಿಂದ ಶಿರಾ ನಗರಸಭೆಯ ವಾರ್ಡ್ 19ರಲ್ಲಿ ಬಿಸಿಎ (ಮಹಿಳೆ) ಎಂದು ಮೀಸಲಾತಿ ನಿಗದಿಪಡಿಸಿರುವುದು ಪುನರಾವರ್ತನೆಯೂ ಆಗಿಲ್ಲ. ಮೀಸಲಾತಿ ಮಾರ್ಗಸೂಚಿಗಳ ಉಲ್ಲಂಘನೆಯೂ ಆಗಿಲ್ಲ. ಆದ್ದರಿಂದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವುದಿಲ್ಲ ಎಂದು ಅರ್ಜಿ ವಜಾಗೊಳಿಸಿದೆ.
ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ವಾದ ಮಂಡಿಸಿ, ಮೀಸಲಾತಿ ಮತ್ತಿತರರ ವಿಚಾರಗಳಿಂದಾಗಿ ಪ್ರತಿ ಬಾರಿ ಚುನಾವಣೆ ವಿಳಂಬವಾಗುತ್ತಿದೆ. ಇದೇ ಡಿಸೆಂಬರ್. 30ರೊಳಗೆ ಚುನಾವಣೆ ಮುಗಿಸುವಂತೆ ಹೈಕೋರ್ಟ್ ವಿಭಾಗೀಯ ಪೀಠ ಗಡುವು ನೀಡಿದೆ. 2018ರಿಂದ ಬಹುತೇಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ವ್ಯವಸ್ಥೆ ಇಲ್ಲ. ಮುಖ್ಯವಾಗಿ ಶಿರಾ ನಗರಸಭೆ ಸೇರಿದಂತೆ 59 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಈ ವಿಚಾರವನ್ನು ನ್ಯಾಯಾಲಯ ಗಮನಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ವಿದ್ಯಾರ್ಥಿಗಳೇ ಗಮನಿಸಿ: ಮಧ್ಯವಾರ್ಷಿಕ ಪರೀಕ್ಷೆಯ ಸಮಯ ಬದಲಾವಣೆ ಮಾಡಿದ ಪಿಯು ಬೋರ್ಡ್