ಬೆಂಗಳೂರು: ನಗರದಲ್ಲಿ ಸಂಚರಿಸುವ ವಾಹನಗಳಲ್ಲಿ ಚಲಿಸುವ ಉದ್ಯಾನ(ಮೂವಿಂಗ್ ಗಾರ್ಡನ್) ವ್ಯವಸ್ಥೆ ಅಳವಡಿಸಲು ಸೂಚನೆ ನೀಡುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ವಜಾಗೊಳಿಸಿರುವ ಹೈಕೋರ್ಟ್, ಖಾಸಗಿ ವಾಹನಗಳನ್ನು ಇದೇ ರೀತಿಯಲ್ಲಿ ಬಳಕೆ ಮಾಡಿ ಎಂದು ಸೂಚನೆ ನೀಡಲು ಅವಕಾಶವಿಲ್ಲ ಎಂದು ತಿಳಿಸಿದೆ.
ಬೆಂಗಳೂರಿನ ಕಬ್ಬನ್ ಪೇಟೆ ನಿವಾಸಿ ಕೆ.ಸುರೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಅವರ ನೇತೃತ್ವದ ವಿಭಾಗೀಯ ಪೀಠ, ಅರ್ಜಿ ವಜಾಗೊಳಿಸಿದ್ದು, ಖಾಸಗಿ ವಾಹನಗಳನ್ನು ಸಂಚಾರಕ್ಕೆ ಹೊರತು ಪಡಿಸಿ, ಇತರ ಕಾರ್ಯಗಳಿಗೆ ಬಳಕೆ ಮಾಡುವಂತೆ ಸೂಚನೆ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ, ಅರ್ಜಿದಾರರ ತಮ್ಮ ವಾಹನದಲ್ಲಿ ಮೂವಿಂಗ್ ಗಾರ್ಡನ್ ಅಳವಡಿಕೆ ಮಾಡಿರುವುದಾಗಿ ಹೇಳಿದ್ದು, ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಆದರೆ, ಅದೇ ರೀತಿಯಲ್ಲಿ ಇತರರಲ್ಲಿ ಜಾಗೃತಿ ಬಂದು ತಮ್ಮ ವಾಹನಗಳಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಬೆಳವಣಿಗೆಯಾಗಲಿದೆ. ಆದರೆ, ನ್ಯಾಯಾಲಯದಿಂದ ಸೂಚನೆ ನೀಡಲು ಅವಕಾಶವಿಲ್ಲ ಎಂದು ಪೀಠ ತಿಳಿಸಿತು.