ಕರ್ನಾಟಕ

karnataka

ETV Bharat / state

ಮಕ್ಕಳ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರನ್ನಾಗಿ ನಾಗಣ್ಣಗೌಡ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ - ಈಟಿವಿ ಭಾರತ ಕನ್ನಡ ನ್ಯೂಸ್

ಮಕ್ಕಳ ಹಕ್ಕುಗಳ ಆಯೋಗಕ್ಕೆ ಕೆ. ನಾಗಣ್ಣಗೌಡ ಅವರನ್ನು ಅಧ್ಯಕ್ಷರನ್ನಾಗಿ ಬಿಜೆಪಿ ಸರ್ಕಾರ ನೇಮಕ ಮಾಡಿತ್ತು. ಈ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Nov 20, 2023, 6:03 PM IST

ಬೆಂಗಳೂರು : ಕೇಂದ್ರ ಸರ್ಕಾರ ಅಧಿಸೂಚಿತ ಸಂಸ್ಥೆಗಳಿಗೆ ಹುದ್ದೆಗಳ ನೇಮಕಕ್ಕೆ ತಜ್ಞರ ಸಮಿತಿ ರಚನೆ ಮಾಡಿರುವಾಗ ಅಂತಹ ಹುದ್ದೆಗೆ ಯಾರು ಅರ್ಹರು ಎಂದು ನ್ಯಾಯಾಲಯಗಳು ರ್ನಿರ್ಧರಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ಹುದ್ದೆಗೆ ಕೆ. ನಾಗಣ್ಣಗೌಡ ಎಂಬುವರನ್ನು ನೇಮಕ ಮಾಡಿದ್ದ ಬಿಜೆಪಿ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ನಾಗಣ್ಣಗೌಡರ ನೇಮಕವನ್ನು ರದ್ದುಗೊಳಿಸಿ ಹೊಸದಾಗಿ ನೇಮಕ ಪ್ರಕ್ರಿಯೆ ನಡೆಸುವಂತೆ ಕೋರಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ಹುದ್ದೆಯ ಆಕಾಂಕ್ಷಿಯಾಗಿದ್ದ ವಕೀಲ ಆಶೋಕ್ ಡಿ.ಸನಾದಿ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಆದೇಶ ಮಾಡಿದೆ.

ಸರ್ಕಾರದ ನೇಮಕಾತಿಗಳನ್ನು ನ್ಯಾಯಿಕ ಪರಾಮರ್ಶೆ ಮಾಡುವ ಸಂದರ್ಭದಲ್ಲಿ ನ್ಯಾಯಾಲಯಗಳು ಸಮಿತಿಗಳು ಹಾಗೂ ಮೇಲ್ಮನವಿ ನ್ಯಾಯಾಧಿಕರಣದಂತೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಸರ್ಕಾರದ ಆಯ್ಕೆ ಸಮಿತಿಗಳು ಅರ್ಹತೆಗಳ ಮಾನದಂಡ ಪರಿಶೀಲನೆ ನಡೆಸುವಲ್ಲಿ ತಪ್ಪೆಸಗಿದ್ದಲ್ಲಿ ಸಾಂವಿಧಾನಾತ್ಮ ನ್ಯಾಯಾಲಯಗಳು ಮಧ್ಯಪ್ರವೆಶಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ನ್ಯಾಯಾಲಯಗಳು ಎಲ್ಲ ಸಂದರ್ಭದಲ್ಲಿ ವಿವೇಚನಾಧಿಕಾರ ಬಳಸುವುದಕ್ಕೆ ಸಾಧ್ಯವಿಲ್ಲ. ಆದರೆ, ಸರ್ಕಾರದ ನೇಮಕಾತಿಗಳಲ್ಲಿ ಕಾನೂನು ಉಲ್ಲಂಘನೆ ಅಥವಾ ನಿರುಂಕುಶತೆಯಿಂದ ಕೂಡಿದ್ದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಬಹುದಾಗಿದೆ ಎಂದು ಪೀಠ ತಿಳಿಸಿದೆ.

ಅಲ್ಲದೇ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡವಲ್ಲಿ ಸರ್ಕಾರ ರಚನೆ ಮಾಡಿರುವ ಸಮಿತಿ ಪೂರ್ವಪರ ಆಲೋಚನೆ ಮಾಡಿಯೇ ನೇಮಕ ಮಾಡಿರಲಿದೆ. ಆಯೋಗಕ್ಕೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಕ್ಕೆ ಪರಿಗಣಿಸುವ ಸಂದರ್ಭದಲ್ಲಿ ಮಾನವ ಹಕ್ಕು ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆ ಮಾಡಿರುವವರು ಹಾಗೂ ಕ್ರಿಮಿನಲ್ ಆರೋಪ ಹೊತ್ತಿರುವ ವ್ಯಕ್ತಿಯನ್ನ ನೇಮಕ ಮಾಡುವುದಕ್ಕೆ ಅವಕಾಶವಿಲ್ಲ. ಮಕ್ಕಳ ಹಕ್ಕುಗಳ ರಕ್ಷಣಾ ಕ್ಷೇತ್ರದಲ್ಲಿ ಕನಿಷ್ಠ ೫ ವರ್ಷ ಸೇವೆ ಮಾಡಿರಬೇಕು ಮತ್ತು ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿರುವಂತಿಲ್ಲ. ಜತೆಗೆ, ಸರ್ಕಾರದಲ್ಲಿ ಯಾವುದೇ ಲಾಭದಾಯಕ ಹುದ್ದೆ ಹೊಂದಿರಬಾರದು ಎಂಬುದಾಗಿ ಷರತ್ತುಗಳಿವೆ.

ಆದರೆ, ಪ್ರತಿವಾದಿ ಆಗಿರುವ ನಾಗಣ್ಣಗೌಡ ಬಿಜೆಪಿ ಪಕ್ಷದ ಸದಸ್ಯರಾಗಿದ್ದರೂ, ಆ ಸ್ಥಾನಕ್ಕೆ ರಾಜೀನಾಮೆ ನೀಡಿದ 15 ತಿಂಗಳ ಬಳಿಕ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಆ ಹುದ್ದೆಗೆ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದ ಸಂದರ್ಭದಲ್ಲಿ ಅವರು ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿರಲಿಲ್ಲ. ಜತೆಗೆ, 2001ರಿಂದ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಬಂಧ ಹಲವು ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಸಂಬಂಧ ಪಡೆದ ಹಲವು ಪ್ರಶಸ್ತಿಗಳನ್ನು ಸಲ್ಲಿಸಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಶೀಲನೆ ನಡೆಸಿ, ಅಂತಿಮವಾಗಿ ಅವರನ್ನು ನೇಮಕ ಮಾಡಿದೆ. ಈ ಹಿನ್ನೆಲೆಯಲ್ಲಿ ನಾಗಣ್ಣಗೌಡರನ್ನು ಈ ಹುದ್ದೆಗೆ ನೇಮಕ ಮಾಡಿರುವ ಪ್ರಕ್ರಿಯೆಯಲ್ಲಿ ಯಾವುದೇ ಕಾನೂನುಗಳ ಉಲ್ಲಂಘನೆ ಮಾಡಿರುವ ಅಂಶಗಳು ಪ್ರಸ್ತುತ ಪ್ರಕರಣದಲ್ಲಿ ಗೋಚರಿಸುತ್ತಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟು ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು ? :ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ಸ್ಥಾನಕ್ಕೆ ಅರ್ಹರನ್ನು ಭರ್ತಿ ಮಾಡುವುದಕ್ಕಾಗಿ ಸರ್ಕಾರ 2022ರ ಜನವರಿ 31 ರಂದು ಅಧಿಸೂಚನೆ ಹೊರಡಿಸಿತ್ತು. ಈ ಹುದ್ದೆಗೆ ಅರ್ಜಿದಾರ ಅಶೋಕ್ ಡಿ ಸನಾದಿ ಅವರ ಮತ್ತು ನಾಗಣ್ಣಗೌಡರು ಅರ್ಜಿ ಸಲ್ಲಿಸಿದ್ದರು.
ಆದರೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸರ್ಕಾರ ನೇಮಕ ಮಾಡಿದ್ದ ಸಮಿತಿ ನಾಗಣ್ಣಗೌಡರನ್ನು ನೇಮಕ ಮಾಡಿ ಆದೇಶಿಸಿತ್ತು. ಈ ಸಂಬಂಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು. ಬಳಿಕ ಮಾಹಿತಿ ಹಕ್ಕು ಕಾಯಿದೆಯಡಿ ಈ ಸಂಬಂಧದ ಎಲ್ಲ ದಾಖಲೆಗಳನ್ನು ಪಡೆದ ಬಳಿಕ ಅಶೋಕ್ ಸನಾದಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ :ಐಎಂಎ ಜೊತೆ ವ್ಯವಹಾರ ಆರೋಪ: ಜಮೀರ್ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಿರಾಕರಣೆ

ABOUT THE AUTHOR

...view details