ಬೆಂಗಳೂರು : ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಅನುಮತಿ ನೀಡಿ ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆಯನ್ನು ಪ್ರಶ್ನಿಸಿ ಡಿ.ಕೆ. ಶಿಕವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಕುರಿತಂತೆ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ಅರ್ಜಿ ವಜಾಗೊಳಿಸಿರುವುದಾಗಿ ಪ್ರಕಟಿಸಿದೆ. ಇದರಿಂದ ಡಿ.ಕೆ. ಶಿವಕುಮಾರ್ ಮತ್ತೆ ಸಂಕಷ್ಟ ಎದುರಾದಂತಾಗಿದೆ.
ಅರ್ಜಿಗೆ ಸಂಬಂಧಿಸಿದಂತೆ ಈ ಹಿಂದೆ ನಡೆದ ವಿಚಾರಣೆ ವೇಳೆ, ಶಿವಕುಮಾರ್ ಪರ ವಾದ ಮಂಡಿಸಿದ ವಕೀಲರು, ಪ್ರಕರಣವನ್ನು ದಾಖಲಿಸಿರುವ ಹಿಂದೆ ರಾಜಕೀಯ ಪಿತೂರಿ ಅಡಗಿದೆ. ಈಗಾಗಲೇ ಆದಾಯ ತೆರಿಗೆಗೆ ಸಂಬಂಧಿಸಿದ ಮೂರು ಪ್ರಕರಣಗಳು ಶಿವಕುಮಾರ್ ಅವರ ಪರವಾಗಿವೆ. ಇದು ನಾಲ್ಕನೇ ಎಫ್‌ಐಆರ್. ಜನಪ್ರತಿನಿಧಿಗಳ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ದಾಖಲಿಸುವ ಮುನ್ನ ವಿಧಾನಸಭಾಧ್ಯಕ್ಷರ ಅನುಮತಿ ಪಡೆಯಬೇಕಿತ್ತು. ಅಂತೆಯೇ, ತನಿಖೆಗೆ ನೀಡಲಾಗಿರುವ ಆಡಳಿತಾತ್ಮಕ ನಿರ್ಧಾರಕ್ಕೆ ಸಕಾರಣವೂ ಇಲ್ಲ. ಹೀಗಾಗಿ, ತನಿಖೆಗೆ ಶಿಫಾರಸು ಮಾಡಲಾದ ಕ್ರಮ ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಪರ ವಾದ ಮಂಡಿಸಿ, ಸರ್ಕಾರ ನಿಯಮಗಳ ಪ್ರಕಾರದಲ್ಲಿಯೇ ತನಿಖೆಗೆ ಸಮ್ಮತಿ ನೀಡಿದೆ. ಇದರಲ್ಲಿ ಯಾವುದೇ ನಿಯಮಗಳು ಉಲ್ಲಂಘನೆ ಆಗಿಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಸಿಬಿಐ ಪರ ವಕೀಲ ಪಿ. ಪ್ರಸನ್ನಕುಮಾರ್, ಇಂತಹುದೇ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಹೇಳುವುದಾಗಲೀ ಅಥವಾ ಇಂತಹುದೇ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸುವ ಹಕ್ಕನ್ನಾಗಲೀ ಆರೋಪಿಯು ಹೊಂದಿಲ್ಲ. ವಿಶೇಷ ಅಧಿನಿಯಮವಾದ, ದೆಹಲಿ ಪೊಲೀಸ್ ಸ್ಥಾಪನಾ ಕಾಯ್ದೆ 1947ರ ಕಲಂ 6ರ ಅಡಿಯಲ್ಲಿ ತನಿಖೆಗೆ ನೀಡಲಾದ ಒಪ್ಪಿಗೆಯ ಕಾರಣಗಳನ್ನು ಸಿಬಿಐ ವಿವರಿಸುವ ಅಗತ್ಯವೇ ಇಲ್ಲ ಎಂದರು.