ಬೆಂಗಳೂರು: ಬಹುರಾಷ್ಟ್ರೀಯ ಕಂಪನಿಗಳಲ್ಲಿನ ಕಾರ್ಮಿಕರ ನಿವೃತ್ತಿ ವಯಸ್ಸನ್ನು 58 ರಿಂದ 60 ವರ್ಷಕ್ಕೆ ಹೆಚ್ಚಿಸಿದ್ದ ಕಾರ್ಮಿಕ ಇಲಾಖೆ ಆಯುಕ್ತರ ಆದೇಶ ಪ್ರಶ್ನಿಸಿ ಫೆಡರಲ್ ಮೊಗಲ್ ಕಂಪನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ.
ಯಲಹಂಕದ ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಫೆಡರಲ್ ಮೊಘಲ್ ಕಂಪನಿ ನಿರ್ದೇಶಕ ರಾಜೇಶ್ ಸಿನ್ಹಾ ಸಲ್ಲಿಸಿದ್ದ ಮೇಲ್ಮನವಿಯನ್ನು ಹಿರಿಯ ನ್ಯಾ. ಬಿ. ವಿ. ನಾಗರತ್ನ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಪೀಠ ತನ್ನ ತೀರ್ಪಿನಲ್ಲಿ, ಭಾರತದಲ್ಲಿ ಮನುಷ್ಯರ ಸರಾಸರಿ ಜೀವಿತಾವಧಿ 63 ವರ್ಷಕ್ಕೆ ಏರಿಕೆಯಾಗಿದೆ. ಭಾರತ, ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್ಒ) ಸದಸ್ಯ ರಾಷ್ಟ್ರವಾಗಿದ್ದು, ಅದು ತನ್ನ ಸದಸ್ಯ ರಾಷ್ಟ್ರಗಳಲ್ಲಿ ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಿಸಲು ಚಿಂತನೆ ನಡೆಸಿದೆ. ಹಾಗಾಗಿ ಸಿಬ್ಬಂದಿ ವೈದ್ಯಕೀಯವಾಗಿ ಸದೃಢರಾಗಿದ್ದರೆ ಅವರ ನಿವೃತ್ತಿ ವಯಸ್ಸು 60ಕ್ಕೆ ಹೆಚ್ಚಿಸಿರುವುದು ಸರಿ ಇದೆ ಎಂದು ತಿಳಿಸಿದೆ. ಅಲ್ಲದೆ, ನಿವೃತ್ತಿ ವಯಸ್ಸು ಹೆಚ್ಚಸಿದ್ದನ್ನು ಖಾಯಂಗೊಳಿಸಿ ಹೈಕೋರ್ಟ್ ಏಕಸದಸ್ಯಪೀಠ 2019ರ ಜೂ.12ರಂದು ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.