ಕರ್ನಾಟಕ

karnataka

ETV Bharat / state

ಭಾವಿ ವರನಿಂದ ಯುವತಿಗೆ ವಂಚನೆ: ಮ್ಯಾಟ್ರಿಮೋನಿ ಸಿಬ್ಬಂದಿ ವಿರುದ್ಧದ ಪ್ರಕರಣ ರದ್ದು

ವರನನ್ನು ಆಯ್ಕೆ ಮಾಡುವ ವಿಚಾರದಲ್ಲಿ ಯುವತಿಗೆ ವಂಚನೆ ಮಾಡಿದ ಆರೋಪದ ಮೇಲೆ ಮ್ಯಾಟ್ರಿಮೋನಿ ಸಿಬ್ಬಂದಿ ವಿರುದ್ಧ ದಾಖಲಾದ ಪ್ರಕರಣವನ್ನು ಹೈಕೋರ್ಟ್​ ರದ್ದುಪಡಿಸಿ ಆದೇಶಿಸಿದೆ.

high-court-dismissed-case-against-matrimony-website-staff-case
ಮ್ಯಾಟ್ರಿಮೋನಿ ಸಿಬ್ಬಂದಿ ವಿರುದ್ಧದ ಪ್ರಕರಣ ರದ್ದು

By

Published : Jan 20, 2023, 11:02 PM IST

ಬೆಂಗಳೂರು : ಗುಣವಂತ ವರನನ್ನು ಆಯ್ಕೆ ಮಾಡಲು ನೆರವಾಗುವುದಾಗಿ ಯುವತಿಗೆ ವಂಚನೆ ಮಾಡಲಾಗಿದೆ ಎಂಬ ಆರೋಪದಲ್ಲಿ ಕನ್ನಡ ಮ್ಯಾಟ್ರಿಮೊನಿಯ ಇಬ್ಬರು ಉದ್ಯೋಗಿಗಳ ವಿರುದ್ಧದ ಪ್ರಥಮ ತನಿಖಾ ವರದಿಯನ್ನು (ಎಫ್‌ಐಆರ್) ಹೈಕೋರ್ಟ್ ರದ್ದುಪಡಿಸಿದೆ. ತಮ್ಮ ವಿರುದ್ದ ದಾಖಲಾಗಿದ್ದ ಎಫ್ಐಆರ್ ರದ್ದು ಮಾಡುವಂತೆ ಕೋರಿ ಕನ್ನಡ ಮ್ಯಾಟ್ರಿಮನಿ ಸಂಸ್ಥೆಯ ಸಿಬ್ಬಂದಿಯಾದ ವಿಜಯ್ ಕುಮಾರ್ ಮತ್ತು ಚಂದ್ರಶೇಖರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯಪೀಠ, ಈ ಆದೇಶ ನೀಡಿದೆ.

ದಾಖಲೆ ಮತ್ತು ಅರ್ಜಿದಾರರ ವಾದವನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಆರೋಪವಿರುವುದು ಉತ್ತಮ ವರ ಹುಡುಕಿಕೊಡುವುದಾಗಿ ಹೆಸರು ನೋಂದಣಿಗೆ 3700 ರೂಪಾಯಿಗಳನ್ನು ಪಡೆದಿರುವುದಾಗಿದೆ. ಆದರೆ ಅವರು ಆ ಕೆಲಸ ಮಾಡದೆ ವಂಚನೆ ಎಸಗಿದ್ದಾರೆ ಎಂಬುದಾಗಿದೆ. ಆದರೆ ವಂಚಿಸುವ ಉದ್ದೇಶ ವೆಬ್​​ಸೈಟ್ ಸಿಬ್ಬಂದಿಗಿತ್ತು ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ. ಹಾಗಾಗಿ ಮ್ಯಾಟ್ರಿಮೋನಿ ಸಿಬ್ಬಂದಿ ವಿರುದ್ಧದ ಪ್ರಕರಣ ರದ್ದುಗೊಳಿಸಲಾಗುತ್ತಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಜೊತೆಗೆ, ಅರ್ಜಿದಾರರ ಮೇಲಿನ ಆರೋಪ ಭಾರತೀಯ ದಂಡ ಸಂಹಿತೆ 420ರ ಅಡಿ ವಂಚನೆ ಎಸಗಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಅಂಶಗಳಿಲ್ಲ. ಸೆಕ್ಷನ್ 420 ಅಡಿ ಆರೋಪ ಸಾಬೀತುಪಡಿಸುವ ಸಾಕ್ಷ್ಯಗಳಿಲ್ಲದ ಕಾರಣ ಅರ್ಜಿದಾರರ ವಿರುದ್ಧ ಪ್ರಕರಣ ಮುಂದುವರಿಸಿದರೆ ಅದು ನ್ಯಾಯಾಂಗದ ದುರ್ಬಳಕೆ ಆಗಲಿದೆ. ಹಾಗಾಗಿ ಅವರ ವಿರುದ್ಧದ ಪ್ರಕರಣ ಕಾನೂನುಬಾಹಿರ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ ಏನು ? : ಮಹಿಳೆಯೊಬ್ಬರು ತನಗೆ ಒಳ್ಳೆಯ ವರನನ್ನು ಹುಡುಕಿಕೊಡುವಂತೆ ಕನ್ನಡ ಮ್ಯಾಟ್ರಿಮನಿ ವೆಬ್‌ಸೈಟ್​​ನಲ್ಲಿ 3,700 ರೂಪಾಯಿ ಕೊಟ್ಟು ನೋಂದಾಯಿಸಿಕೊಂಡಿದ್ದರು. ಆನಂತರ ಅಮೆರಿಕಾದ ವರನೆಂದು ಅಮಿತ್ ದೀಪಕ್ ಎಂಬಾತ ಪೋರ್ಟಲ್ ಮೂಲಕ ಆಕೆಯನ್ನು ಪರಿಚಯಿಸಿಕೊಂಡಿದ್ದ. ಆತ ಒಡವೆಗಳನ್ನು ಬೆಂಗಳೂರಿಗೆ ತರುವಾಗ ಕಸ್ಟಮ್ಸ್ ಅಧಿಕಾರಿಗಳು ಹಿಡಿದಿದ್ದಾರೆಂದು ಸುಳ್ಳು ಹೇಳಿ 1.70 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದ.

ಇದಾದ ಬಳಿಕ ಆ ಮಹಿಳೆ ಐಸಿಪಿ ಕಾಯಿದೆ ಸೆಕ್ಷನ್ 420 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ 2008ರ ಸೆಕ್ಷನ್ 66 (ಡಿ) ಅಡಿ ದೀಪಕ್, ವಿಜಯ್ ಕುಮಾರ್ ಮತ್ತು ಚಂದ್ರಶೇಖರ್ ಅವರುಗಳ ವಿರುದ್ಧ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದರು. ಆದ್ದರಿಂದ ಎಫ್‌ಐಆರ್ ರದ್ದುಕೋರಿ ಅರ್ಜಿದಾರರು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:ಹೈಕೋರ್ಟ್ ಆದೇಶ ಪಾಲಿಸದ ಕಾರಣ 50 ಸಾವಿರ ದಂಡ ಪಾವತಿಸಿದ ಅಧಿಕಾರಿ

ಮಹಿಳಾ ವಕೀಲರ ಒಕ್ಕೂಟದ ಚುನಾವಣೆ:ಭಾರತೀಯ ಮಹಿಳಾ ವಕೀಲರ ಒಕ್ಕೂಟದ ಕರ್ನಾಟಕ ಘಟಕದ ಪದಾಧಿಕಾರಿಗಳ ಆಯ್ಕೆಗೆ ಶನಿವಾರ (ಜನವರಿ 21) ಚುನಾವಣೆ ನಡೆಯಲಿದೆ. ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ, ಜಂಟಿ ಕಾರ್ಯದರ್ಶಿ ಮತ್ತು 7 ಜನ ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕೆ ಈ ಚುನಾವಣೆ ನಡೆಯಲಿದೆ. ಹೈಕೋರ್ಟ್ ಆವರಣದಲ್ಲಿರುವ ಬೆಂಗಳೂರು ವಕೀಲರ ಸಂಘದ ಹಾಲ್ ಸಂಖ್ಯೆ-1ರಲ್ಲಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಚುನಾವಣೆ ನಡೆಯಲಿದೆ. ನಂತರ ಎಣಿಕೆ ನಡೆಸಿ ಫಲಿತಾಂಶ ಘೋಷಣೆ ಮಾಡಲಾಗುತ್ತದೆ. ಚುನಾವಣೆಯಲ್ಲಿ ಆಯ್ಕೆಯಾಗುವ ಪದಾಧಿಕಾರಿಗಳ ಅವಧಿ ಮೂರು ವರ್ಷ ಆಗಿರುತ್ತದೆ ಎಂದು ಚುನಾವಣಾಧಿಕಾರಿಯಾದ ಹಿರಿಯ ವಕೀಲ ಎ.ಜಿ. ಶಿವಣ್ಣ ತಿಳಿಸಿದ್ದಾರೆ.

ಇದನ್ನೂ ಓದಿ:ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಬಡಾವಣೆ ನಿರ್ಮಾಣ: ಪರ್ಯಾಯ ಭೂಮಿ, 5 ಲಕ್ಷ ಪರಿಹಾರ ನೀಡುವಂತೆ ಬಿಡಿಎಗೆ ಹೈಕೋರ್ಟ್ ಸೂಚನೆ

ABOUT THE AUTHOR

...view details