ಬೆಂಗಳೂರು:ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರು ಹಾಜರುಪಡಿಸುವ ಆರೋಪಿಗಳು ಅಪ್ರಾಪ್ತ ವಯಸ್ಕರಲ್ಲ ಎಂದು ಖಚಿತಪಡಿಸಿಕೊಳ್ಳಲು ವಿಶೇಷ ನ್ಯಾಯಾಲಯಗಳು ಸೇರಿದಂತೆ ಎಲ್ಲ ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
18 ರಿಂದ 22 ವರ್ಷದೊಳಗಿನ ಆರೋಪಿಗಳನ್ನು ನ್ಯಾಯಾಲಯಗಳ ಮುಂದೆ ಹಾಜರುಪಡಿಸಿದಾಗ ವಯಸ್ಸಿಗೆ ಸಂಬಂಧಿಸಿದಂತೆ ದಾಖಲೆ ಪುರಾವೆಗಳನ್ನು ಒದಗಿಸಲು ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ತನಿಖಾಧಿಕಾರಿಗಳು ಹಾಗೂ ಆರೋಪಿಗಳಿಗೆ ಸೂಚಿಸಬೇಕು ಎಂದು ಕೋರ್ಟ್ ತಿಳಿಸಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ (ಪೋಕ್ಸೊ) ಪ್ರಕರಣದಲ್ಲಿ ಅಪ್ರಾಪ್ತ ಆರೋಪಿಯನ್ನು (16 ವರ್ಷ) ಬಾಲಾಪರಾಧಿ ನ್ಯಾಯ ಮಂಡಳಿಗೆ ಕರೆದೊಯ್ಯುವ ಬದಲಾಗಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ. ಅಲ್ಲದೇ, ಅಪರಾಧಿಯ ಶಿಕ್ಷೆಯನ್ನು ರದ್ದು ಮಾಡಿ ಆದೇಶಿಸಿದೆ.
ಅಲ್ಲದೇ, ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲೇಖಿಸಿರುವ ಹೈಕೋರ್ಟ್, ವಿಚಾರಣಾ ನ್ಯಾಯಾಲಯಗಳು, ಆರೋಪಿಗಳನ್ನು ಮೊದಲ ಬಾರಿಗೆ ಹಾಜರುಪಡಿಸುವ ವೇಳೆ ಪೊಲೀಸರ ನಡವಳಿಕೆಗಳು, ವಶಕ್ಕೆ ಪಡೆದ ಕುರಿತು ಆರೋಪಿಗಳ ಕುಟುಂಬ ಸದಸ್ಯರಿಗೆ ನೀಡಿದ ಮಾಹಿತಿ, ಬಂಧನದ ಕಾರಣಗಳು, ಬಂಧನದ ಸ್ಥಳದ ಬಗ್ಗೆ ಹೊರತಾಗಿ ವಯಸ್ಸಿನ ಬಗ್ಗೆ ಮೌಖಿಕ ವಿಚಾರಣೆ ನಡೆಸಬೇಕು ಎಂದು ಹೇಳಿದೆ. ಜೊತೆಗೆ, ಯಾವುದೇ ಕಾಯಿಲೆಗಳು ಇದ್ದಲ್ಲಿ ಆದೇಶದಲ್ಲಿ ದಾಖಲಿಸಬೇಕು ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.