ಕರ್ನಾಟಕ

karnataka

ETV Bharat / state

ಉಪ ಖನಿಜ ರಿಯಾಯಿತಿ ನಿಯಮ ಪ್ರಶ್ನಿಸಿದ್ದ ಅರ್ಜಿ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮ-2023 ಆಕ್ಷೇಪಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ಹೈಕೋರ್ಟ್​ನಲ್ಲಿ ನಡೆಯಿತು.

Etv Bharathigh-court-directs-to-submit-report-on-petition-challenging-sub-mineral-concession-rule
ಉಪ ಖನಿಜ ರಿಯಾಯಿತಿ ನಿಯಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

By ETV Bharat Karnataka Team

Published : Jan 10, 2024, 8:59 AM IST

ಬೆಂಗಳೂರು :ಕಲ್ಲುಗಣಿ, ಎಂ-ಸ್ಯಾಂಡ್​ ಸೇರಿದಂತೆ ಉಪ ಖನಿಜಗಳ ಗಣಿ ಗುತ್ತಿಗೆಗಳ ಅವಧಿಯನ್ನು ಕನಿಷ್ಠ 30 ವರ್ಷ ಮತ್ತು ಗರಿಷ್ಠ 50 ವರ್ಷಕ್ಕೆ ವಿಸ್ತರಿಸಲು ಅವಕಾಶ ಮಾಡಿಕೊಟ್ಟಿರುವ ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮ-2023 ಅನ್ನು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿಯ ಕುರಿತು ಸಮಗ್ರ ವರದಿ ಸಲ್ಲಿಸಲು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ.

ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ಆಮ್ ಆದ್ಮಿ ಪಕ್ಷದ ಮಾಜಿ ಹಾಸನ ಜಿಲ್ಲಾಧ್ಯಕ್ಷ ಕೆ ಪಿ ಶಿವಕುಮಾರ್ ಅವರು ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯಪೀಠ ಈ ನಿರ್ದೇಶನ ನೀಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲೆ ವಿಜೇತಾ ಆರ್. ನಾಯಕ್, ಕೇಂದ್ರ ಸರ್ಕಾರದ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ-1957ಕ್ಕೆ ತದ್ವಿರುದ್ಧವಾಗಿ ರಾಜ್ಯ ಸರ್ಕಾರ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳಿಗೆ ತಿದ್ದುಪಡಿ ತಂದಿದೆ. ಎಂ-ಸ್ಯಾಂಡ್ ಗಣಿಗಾರಿಕೆಗೆ ಗರಿಷ್ಠ 20 ವರ್ಷಕ್ಕೆ ಮತ್ತು ಕಲ್ಲುಗಣಿಗಾರಿಕೆ (ಗ್ರಾನೈಟ್​)ಗೆ ಗರಿಷ್ಠ 30 ವರ್ಷಕ್ಕೆ ಗಣಿ ಗುತ್ತಿಗೆ ನೀಡಬಹುದು.

ಆದರೆ, ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿ ಪ್ರಕಾರ ನಿರ್ದಿಷ್ಟ ಖನಿಜಗಳಿಗೆ ಚಾಲ್ತಿ ಗಣಿ ಗುತ್ತಿಗೆ ಅವಧಿ 20 ವರ್ಷ ಇದ್ದದ್ದನ್ನು 30 ವರ್ಷಕ್ಕೆ ಹಾಗೂ ಅನಿರ್ದಿಷ್ಟವಲ್ಲದ ಖನಿಜಗಳಿಗೆ ಗಣಿ ಗುತ್ತಿಗೆ ಅವಧಿಯು 30 ವರ್ಷ ಇದ್ದದ್ದನ್ನು ಏಕಾಏಕಿ 50 ವರ್ಷಕ್ಕೆ ವಿಸ್ತರಿಸಲಾಗಿದೆ. ಇದು ಕಾನೂನು ಬಾಹಿರ ಎಂದು ವಕೀಲೆ ವಿಜೇತಾ ಆರ್. ನಾಯಕ್ ನ್ಯಾಯಪೀಠಕ್ಕೆ ತಿಳಿಸಿದರು.

ಅಲ್ಲದೇ, ಹೊಸ ಹರಾಜಿಗೆ ಅವಕಾಶ ಕೊಡದೆ, ಚಾಲ್ತಿ ಗಣಿ ಗುತ್ತಿಗೆಗಳ ಅವಧಿಯನ್ನು ವಿಸ್ತರಿಸುವುದರಿಂದ ರಾಜ್ಯ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಆದಾಯ ಖೋತಾ ಆಗುತ್ತಿದೆ. ಜೊತೆಗೆ ಗಣಿಗಾರಿಕೆಗೆ ಹೊಸಬರಿಗೆ ಅವಕಾಶ ಸಿಗದಂತಾಗಿದೆ. ಚಾಲ್ತಿ ಗಣಿ ಗುತ್ತಿಗೆಗಳ ಅವಧಿ ವಿಸ್ತರಿಸುವುದರಿಂದ ಹಳೆಯ ಗಣಿ ಗುತ್ತಿಗೆದಾರರ ಪ್ರಾಬಲ್ಯ ಹೆಚ್ಚಾಗಿ ಅದು ಏಕಸ್ವಾಮ್ಯಕ್ಕೆ ಅವಕಾಶ ಮಾಡಿಕೊಡಲಿದೆ. ಆದ್ದರಿಂದ ಅವಧಿ ವಿಸ್ತರಣೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ 2023ರ ಮಾರ್ಚ್ 17ರಂದು ಜಾರಿಗೆ ತಂದಿರುವ ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮ-2023ರ ನಿಯಮ 8(ಎ)(1) ಅನ್ನು ರದ್ದುಪಡಿಸಬೇಕು. ಗಣಿ ಗುತ್ತಿಗೆ ನೀಡುವ ಸಂಬಂಧ ಕೇಂದ್ರ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಅರ್ಜಿ ಇತ್ಯರ್ಥ ಆಗುವ ತನಕ ತಿದ್ದುಪಡಿ ನಿಯಮಗಳ ಜಾರಿಗೆ ತಡೆ ನೀಡಬೇಕು ಎಂದು ವಕೀಲೆ ವಿಜೇತಾ ಕೋರಿದರು.

ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ, ಇದೊಂದು ಗಂಭೀರ ವಿಚಾರ. ಅರ್ಜಿಯಲ್ಲಿ ಆಕ್ಷೇಪಿಸಲಾದ ವಿಷಯಗಳ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಇದೇ ವೇಳೆ ಅರ್ಜಿಯಲ್ಲಿ ತಮ್ಮನ್ನು ಪ್ರತಿವಾದಿಯಾಗಿ ಸೇರಿಸಬೇಕು ಎಂದು ಫೆಡರೇಷನ್ ಆಫ್ ಕರ್ನಾಟಕ ಗ್ರಾನೈಟ್ ಇಂಡಸ್ಟ್ರಿ ಸಲ್ಲಿಸಿದ ಮಧ್ಯಂತರ ಅರ್ಜಿ ಅಂಗೀಕರಿಸಿ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ವಿಚಾರಣೆಯನ್ನು ಜನವರಿ 19ಕ್ಕೆ ಮುಂದೂಡಿದೆ.

ಇದನ್ನೂ ಓದಿ:ಪ್ಲಾಸ್ಟಿಕ್ ಉತ್ಪನ್ನಕ್ಕೆ ಬಳಸುವ ಪಾಲಿಥಿನ್‌ ಗುಣಮಟ್ಟ ಕಾಯ್ದುಕೊಳ್ಳುವ ಕೇಂದ್ರದ ಕ್ರಮ ಸರಿಯಿದೆ: ಹೈಕೋರ್ಟ್

ABOUT THE AUTHOR

...view details