ಬೆಂಗಳೂರು: ಚಿತ್ರದುರ್ಗದ ಮುರುಘ ರಾಜೇಂದ್ರ ಬೃಹನ್ಮಠ ಮತ್ತು ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ವೇತನ ಪಾವತಿಸುವ ಸಂಬಂಧ ಸಮಗ್ರ ಮಾಹಿತಿಯುಳ್ಳ ಮೆಮೊ ಸಲ್ಲಿಸುವಂತೆ ಶಿವಮೂರ್ತಿ ಮುರುಘರಾಜೇಂದ್ರ ಶರಣರ ಪರ ವಕೀಲರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಪೋಕ್ಸೋ ಮತ್ತು ಜಾತಿ ನಿಂದನೆ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘ ರಾಜೇಂದ್ರ ಬೃಹನ್ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಮಠದ ಬ್ಯಾಂಕ್ ಖಾತೆಗಳ ಚೆಕ್ಗಳಿಗೆ ಸಹಿ ಹಾಕುವುದಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮೆಮೊ ಸಲ್ಲಿಸಿ ಬಸವೇಶ್ವರ ಆಸ್ಪತ್ರೆ ಸಿಬ್ಬಂದಿಗೆ ವೇತನ ನೀಡಲು 101 ಚೆಕ್ಗಳಿಗೆ ಸಹಿ ಹಾಕಬೇಕಾಗಿದೆ ಎಂದು ದಾಖಲೆಗಳೊಂದಿಗೆ ವಿವರಿಸಿದರು. ಈ ವೇಳೆ, ಎಲ್ಲ ಚೆಕ್ಗಳು ಸೆಲ್ಫ್ ಅಂತ ಇದೆ. ಸಂಸ್ಥೆಯ ಹೆಸರಿನಲ್ಲಿ ಯಾವುದೇ ಚೆಕ್ ಇಲ್ಲ ಏಕೆ ಎಂದು ಪ್ರಶ್ನಿಸಿತು. ಅಲ್ಲದೆ, ಈ ಸಂಬಂಧ ಸಮಗ್ರ ಮಾಹಿತಿಯುಳ್ಳ ಮೆಮೊ ಸಲ್ಲಿಸಿ ಎಂದು ಸೂಚನೆ ನೀಡಿತು.