ಬೆಂಗಳೂರು :ಕ್ರಿಮಿನಲ್ ಪ್ರಕರಣಗಳ ತನಿಖೆ ನಡೆಸಿ ಸಿದ್ಧಪಡಿಸಿದ ಪ್ರಕರಣದ ಅಂತಿಮ ವರದಿ ಕುರಿತು ಮಾಹಿತಿಯನ್ನು ಪ್ರಕರಣದ ಪ್ರಥಮ ವರ್ತಮಾನ ಮಾಹಿತಿದಾರನಿಗೆ (ದೂರುದಾರ) ಕಡ್ಡಾಯವಾಗಿ ನೀಡುವಂತೆ ಎಲ್ಲಾ ತನಿಖಾ ಸಂಸ್ಥೆಗಳ ತನಿಖಾಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಬಿ.ಪ್ರಶಾಂತ್ ಹೆಗ್ಡೆ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ.
ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ 173 (2) ಪ್ರಕಾರ ತನಿಖಾಧಿಕಾರಿಯು ತನಿಖೆ ಪೂರ್ಣಗೊಳಿಸಿ ಅದರ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಸೆಕ್ಷನ್ 173 (2)(2) ಪ್ರಕಾರ ಅಂತಿಮ ವರದಿ ಸಲ್ಲಿಕೆಯ ಕುರಿತು ದೂರುದಾರನಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಈ ಕುರಿತು ಸುಪ್ರಿಂ ಕೋರ್ಟ್ ಸಹ ಆದೇಶ ಮಾಡಿದೆ ಎಂದು ನ್ಯಾಯಪೀಠ ತಿಳಿಸಿದೆ.
ಅಲ್ಲದೆ, ತನಿಖೆಯ ಅಂತಿಮ ವರದಿ ಸಲ್ಲಿಕೆ ಕುರಿತು ತನಿಖಾಧಿಕಾರಿ ದೂರುದಾರನಿಗೆ ಮಾಹಿತಿ ನೀಡಿದರೆ, ತನಿಖೆ ಬಗ್ಗೆ ತಿಳಿಯಲು ಮತ್ತು ಪ್ರಕರಣವನ್ನು ಅನುಸರಿಸಲು (ಫಾಲೋ ಅಪ್) ಆತನಿಗೆ ಅನುಕೂಲವಾಗುತ್ತದೆ. ಆದರೆ, ಪ್ರಕರಣದಲ್ಲಿ ಎರಡು ಖಾಸಗಿ ಬ್ಯಾಂಕ್ ಅಧಿಕಾರಿಗಳಿಂದ ಹಣ ದುರ್ಬಳಕೆ ಮತ್ತು ವಂಚನೆ ಆರೋಪ ಸಂಬಂಧ ಅರ್ಜಿದಾರ ನೀಡಿದ್ದ ದೂರಿನ ಮೇಲೆ ಸಿಐಡಿ ತನಿಖೆ ನಡೆಸಿದೆ. ಜೊತೆಗೆ, ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಆದರೆ, ತನಿಖೆಯ ಅಂತಿಮ ವರದಿ ಕುರಿತು ದೂರುದಾರನಿಗೆ ಮಾಹಿತಿ ನೀಡಿಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಅಂತಿಮವಾಗಿ 'ರಾಜ್ಯದ ಎಲ್ಲಾ ತನಿಖಾ ಸಂಸ್ಥೆಗಳ ತನಿಖಾಧಿಕಾರಿಗಳಿಗೆ ತನಿಖೆಯ ಅಂತಿಮ ವರದಿ ಬಗ್ಗೆ ಪ್ರಕರಣದ ದೂರುದಾರರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು' ಎಂಬುದಾಗಿ ನಿರ್ದೇಶಿಸುವಂತೆ ಡಿಜಿಪಿಗೆ ನ್ಯಾಯಪೀಠ ನಿರ್ದೇಶಿಸಿದೆ.