ಕರ್ನಾಟಕ

karnataka

ETV Bharat / state

ಕನಿಷ್ಟ ವೇತನ ಮರು ನಿಗದಿ ಮಾಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ - minimum wages case

ಕನಿಷ್ಟ ವೇತನ ಕುರಿತಂತೆ ರಾಜ್ಯ ಸರ್ಕಾರದ ಈ ಹಿಂದಿನ ಅಧಿಸೂಚನೆ ರದ್ದುಪಡಿಸಿರುವ ಹೈಕೋರ್ಟ್, ಹೊಸದಾಗಿ ನಿಗದಿ ಮಾಡುವಂತೆ ಸೂಚಿಸಿದೆ.

high-court-directs-state-government-to-refix-minimum-wages
ಕನಿಷ್ಟ ವೇತನ ಮರು ನಿಗದಿ ಮಾಡಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ

By ETV Bharat Karnataka Team

Published : Oct 6, 2023, 8:16 PM IST

ಬೆಂಗಳೂರು:ಕನಿಷ್ಟ ವೇತನ ಕುರಿತಂತೆ ರಾಜ್ಯ ಸರ್ಕಾರ ಕಳೆದ 2022ರಲ್ಲಿ ನಿಗದಿಪಡಿಸಿ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಿರುವ ಹೈಕೋರ್ಟ್, ಸುಪ್ರೀಂ ಕೋರ್ಟ್ ರೋಪ್ಟಾ ಕೋಸ್​ ಪ್ರಕರಣದಲ್ಲಿ ತಿಳಿಸಿರುವ ಮಾರ್ಗಸೂಚಿಗಳ ಅನ್ವಯದಂತೆ ಮರು ಲೆಕ್ಕಾಚಾರ ಮಾಡಿ ಹೊಸದಾಗಿ ನಿಗದಿ ಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಹೈಕೋರ್ಟ್​ನ ಈ ಆದೇಶದಿಂದ ರಾಜ್ಯದಲ್ಲಿನ ಅಸಂಘಟಿತ ವಲಯದ 1.7 ಕೋಟಿ ಕಾರ್ಮಿಕರ ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ 2022ರ ಜೂನ್​ 6ರಂದು ಹೊರಡಿಸಿದ್ದ ಅಧಿಸೂಚನೆ ರದ್ದು ಮಾಡುವಂತೆ ಕೋರಿ ಇಂಡಿಯನ್​ ಟ್ರೇಡ್​ ಯೂನಿಯನ್​ ಕಾಂಗ್ರೆಸ್ ​(ಎಐಯುಟಿಯುಸಿ) ಮತ್ತು ಎಂಜಿನಿಯರಿಂಗ್​ ಅಂಡ್​ ಜನರಲ್​ ವರ್ಕರ್ಸ್​ ಯೂನಿಯನ್ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ. ಅಲ್ಲದೆ, ಮುಂದಿನ ಎರಡು ತಿಂಗಳಲ್ಲಿ ವೇತನ ಪರಷ್ಕರಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದೆ.

ಪ್ರಕರಣದ ಹಿನ್ನೆಲೆ:ರಾಜ್ಯ ಸರ್ಕಾರ 2022ರ ಜೂನ್​ 25ರಂದು ಸುಮಾರು 34 ವಲಯಗಳ ಅಸಂಘಟಿತ ಕಾರ್ಮಿಕ ವಲಯಕ್ಕೆ ಶೇ. 5ರಿಂದ ಶೇ. 10ರ ವರೆಗೂ ಹೆಚ್ಚಳ ಮಾಡಿ ಸರ್ಕಾರ ಅಧಿಸೂಚನೆ ಹೊರಡಿತ್ತು. ಆದರೆ, ಈ ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನ ಸುಪ್ರೀಂ ಕೋರ್ಟ್​​ನ ಯಾವುದೇ ನಿಯಮಗಳನ್ನು ಅನುಸರಿಸಿಲ್ಲ. ಅಲ್ಲದೆ, ಕಾರ್ಮಿಕ ಇಲಾಖೆಗಳ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಆದ ಕಾರಣ ಅಧಿಸೂಚನೆ ರದ್ದುಪಡಿಸಬೇಕು. ಅಲ್ಲದೆ, ಸುಪ್ರೀಂ ಕೋರ್ಟ್ 1992ರಲ್ಲಿ ರೋಪ್ಟಾ ಕೋಸ್​ ನೀಡಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಕನಿಷ್ಟ ವೇತನವನ್ನು ನಿಗದಿ ಪಡಿಸಲು ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

ರಾಜ್ಯದಲ್ಲಿ 105 ವಲಯಗಳಲ್ಲಿ ಅಸಂಘಟಿತ ಕಾರ್ಮಿಕರಿಗೆ ಕನಿಷ್ಟ ವೇತನ ಅನ್ವಯ ಆಗಲಿದೆ. ಕನಿಷ್ಟ ವೇತನವನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡಬೇಕಾಗಿದೆ. ಅಲ್ಲದೆ, ರಾಜ್ಯದಲ್ಲಿ ಸರ್ಕಾರ 16 ಕೇಂದ್ರಗಳಲ್ಲಿ ಅಗತ್ಯ ವಸ್ತುಗಳ ಮೌಲ್ಯಗಳ ಸಂಬಂಧ ಪರಿಗಣಿಸಿರುವುದಾಗಿ ಹೇಳಲಾಗಿದೆ. ಆದರೆ, ವೇತನ ಪರಿಷ್ಕರಣೆ ಮಾಡುವುದಕ್ಕೂ ಮುನ್ನ ಕಾರ್ಮಿಕ ಇಲಾಖೆ ನಡೆಸಿರಲಿಲ್ಲ. ಸಮೀಕ್ಷೆ ನಡೆಸಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಕಾರ್ಮಿಕ ಇಲಾಖೆ ಕನಿಷ್ಟ ವೇತನ ನಿಗದಿ ಮಾಡುವುದಕ್ಕೆ ಮಾತ್ರ ಸಮೀಕ್ಷೆ ನಡೆಸುವುದು ಕಡ್ಡಾಯವಾಗಿದೆ. ಆದರೆ, ಪರಿಷ್ಕರಣೆಗೆ ಈ ಸಮೀಕ್ಷೆ ಅಗತ್ಯವಿಲ್ಲ ಎಂದು ವಾದಿಸಿತ್ತು. ಈ ವಾದವನ್ನು ತಳ್ಳಿ ಹಾಕಿರುವ ಹೈಕೋರ್ಟ್​​​, ಮುಂದಿನ ಎರಡು ತಿಂಗಳಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪರಿಷ್ಕೃತ ವೇತನ ನಿಗದಿ ಪಡಿಸಬೇಕು ಎಂದು ಸೂಚನೆ ನೀಡಿ ಆದೇಶಿಸಿದೆ.

ಇದನ್ನೂ ಓದಿ:ಚುನಾವಣಾ ಪ್ರಣಾಳಿಕೆ ಪಕ್ಷಕ್ಕೆ ಸಂಬಂಧಿಸಿದ್ದೇ ವಿನಾ ವ್ಯಕ್ತಿಗತವಲ್ಲ: ಹೈಕೋರ್ಟ್‌ಗೆ ಜಮೀರ್ ವಿವರಣೆ

ABOUT THE AUTHOR

...view details