ಬೆಂಗಳೂರು: ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ನಿಯಮದಂತೆ ಪ್ರಾಯೋಗಿಕ ಪರೀಕ್ಷೆ ನಡೆಸದ ಹಿನ್ನೆಲೆಯಲ್ಲಿ ಸುಮಾರು 70 ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳನ್ನು ಹೊಸದಾಗಿ ನಡೆಸುವಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್)ಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಅನಿರುದ್ಧ ಎಂಬವರು ಸೇರಿದಂತೆ ಮತ್ತಿತರ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿತು.
ಇದೀಗ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್ಎಂಸಿ) ಎಂದು ಕರೆಯಲಾಗುತ್ತಿರುವ ಎಂಸಿಐ ನಿಯಮದಂತೆ ಪ್ರಾಯೋಗಿಕ ಮತ್ತು ಪಠ್ಯ(ಥಿಯರಿ) ಪರೀಕ್ಷೆಗೆ ನಾಲ್ವರು ಪರೀಕ್ಷಾ ಮೇಲ್ವಿಚಾರಕರು ಇರಬೇಕು. ಪ್ರತಿಯೊಬ್ಬ ಪರೀಕ್ಷಕರು ಸ್ವತಂತ್ರವಾಗಿ ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡಿ ಅಂಕಗಳನ್ನು ನೀಡಬೇಕು. ಆದರೆ, ನ್ಯಾಯಾಲಯ ಈ ಬಗ್ಗೆ ಹಲವು ಬಾರಿ ಆದೇಶ ನೀಡಿದ್ದರೂ ಸಹ ಆರ್‌ಜಿಯುಎಚ್‌ಎಸ್ ಮತ್ತದೇ ದೋಷಗಳನ್ನು ಮಾಡುತ್ತಿರುವುದು ದುರದೃಷ್ಟಕರ ಎಂದು ಪೀಠ ಬೇಸರ ವ್ಯಕ್ತಪಡಿಸಿತು.
ಅಲ್ಲದೇ, ಎಂಸಿಐನ ಪದವಿ ವೈದ್ಯಕೀಯ ಶಿಕ್ಷಣ 1977 ನಿಯಮ 13ರ ಪ್ರಕಾರ ಪ್ರಾಯೋಗಿಕ /ಕ್ಲಿನಿಕಲ್ ಪರೀಕ್ಷೆಗಳನ್ನು ಹೊಸದಾಗಿ ನಡೆಸಬೇಕು ಎಂದು ನಿರ್ದೇಶನ ನೀಡಿರುವ ನ್ಯಾಯಾಲಯ, ಪೂರಕ ಪರೀಕ್ಷೆಗೂ ಮುನ್ನ ಹೊಸದಾಗಿ ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿಯನ್ನು ನಿಗದಿಪಡಿಸಬೇಕು ಎಂದು ಆದೇಶಿಸಿದೆ. ಪ್ರತಿಯೊಬ್ಬ ಪರೀಕ್ಷಾ ಮೇಲ್ವಿಚಾರಕರು ಸ್ವತಂತ್ರವಾಗಿ ಅಂಕ ನೀಡಬೇಕಾಗಿಲ್ಲ ಎಂಬ ವಿಶ್ವವಿದ್ಯಾಲಯದ ವಾದವನ್ನು ಕೋರ್ಟ್ ತಿರಸ್ಕರಿಸಿದೆ.