ಕರ್ನಾಟಕ

karnataka

ETV Bharat / state

ಹೆಚ್ಚುವರಿ ಪಡೆದಿದ್ದ ಶುಲ್ಕ ಹಿಂದಿರುಗಿಸುವಂತೆ ಮೆಡಿಕಲ್ ಕಾಲೇಜಿಗೆ ಹೈಕೋರ್ಟ್ ಸೂಚನೆ - ಹೈಕೋರ್ಟ್

ಕೆಇಎ ನಿಗದಿಪಡಿಸಿದ್ದಕ್ಕಿಂತ ಹೆಚ್ಚುವರಿ ಶುಲ್ಕವನ್ನು ಪ್ರವೇಶಾತಿ ವೇಳೆ ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ತಮ್ಮಿಂದ ಸಂಗ್ರಹಿಸಿದೆ. ಹೆಚ್ಚುವರಿ ಪಡೆದ ಶುಲ್ಕ ಹಿಂತಿರುಗಿಸಲು ನಿರ್ದೇಶಿಸಬೇಕೆಂದು 70 ವಿದ್ಯಾರ್ಥಿಗಳು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

high court
ಹೈಕೋರ್ಟ್​

By

Published : May 12, 2023, 7:51 PM IST

ಬೆಂಗಳೂರು: ಎಂಬಿಬಿಎಸ್ ಪದವಿಯ 70 ವಿದ್ಯಾರ್ಥಿಗಳಿಂದ ಸರ್ಕಾರ ನಿಗದಿಪಡಿಸಿದ್ದ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಸಂಗ್ರಹಿಸಿರುವ ಶುಲ್ಕವನ್ನು ಮರುಪಾವತಿ ಮಾಡುವಂತೆ ನಗರದ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಹೆಚ್ಚುವರಿಯಾಗಿ ಶುಲ್ಕವನ್ನು ಮರುಪಾವತಿಸುವಂತೆ ಕಾಲೇಜಿಗೆ ನಿರ್ದೇಶಿಸಬೇಕು ಎಂದು ಕೋರಿದ ಜೆ.ಬಿಂದುಶ್ರೀ ಸೇರಿದಂತೆ 70 ವಿದ್ಯಾರ್ಥಿಗಳು ಸೇರಿ ಮೂರು ಪ್ರತ್ಯೇಕ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ವಿಜಯ ಕುಮಾರ್​ ಎ.ಪಾಟೀಲ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಪ್ರವೇಶಾತಿ ಮೇಲ್ವಿಚಾರಣಾ ಸಮಿತಿ ಶಿಫಾರಸು ಮಾಡಿರುವಂತೆ ಅರ್ಜಿದಾರ ವಿದ್ಯಾರ್ಥಿಗಳಿಂದ 2017-18, 2018-19, 2019-20 ಮತ್ತು 2020-21ನೇ ಸಾಲಿನ ವರೆಗೆ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಿಗದಿಪಡಿಸಿದ್ದ ಪ್ರಮಾಣಕ್ಕಿಂತ ಹೆಚ್ಚುವರಿ ಸಂಗ್ರಹಿಸಿರುವ ಶುಲ್ಕವನ್ನು ವಾರ್ಷಿಕ ಶೇ.6ರಷ್ಟು ಬಡ್ಡಿದರಲ್ಲಿ ಎರಡು ತಿಂಗಳ ಒಳಗೆ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮರು ಪಾವತಿ ಮಾಡಬೇಕು ಎಂದು ಆದೇಶದಲ್ಲಿ ಹೈಕೋರ್ಟ್ ಸೂಚಿಸಿದೆ.

ಅರ್ಜಿದಾರ ವಿದ್ಯಾರ್ಥಿಗಳು 2017-18ನೇ ಸಾಲಿನಲ್ಲಿ ಖಾಸಗಿ ಸೀಟುಗಳ ಕೋಟಾದಡಿ ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ಪಡೆದಿದ್ದರು. 2023ರ ಫೆಬ್ರವರಿಯಲ್ಲಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳು, ರಾಜ್ಯ ಸರ್ಕಾರ ಮತ್ತು ಕೆಇಎ ನಿಗದಿಪಡಿಸಿದ್ದ ಪ್ರಮಾಣಕ್ಕಿಂತ ಅಧಿಕ ಶುಲ್ಕವನ್ನು ಪ್ರವೇಶಾತಿ ಸಂದರ್ಭದಲ್ಲಿ ಕಾಲೇಜು ತಮ್ಮಿಂದ ಸಂಗ್ರಹಿಸಿದೆ. ಆ ಹಣವನ್ನು ಮರು ಪಾವತಿಸಲು ನಿರ್ದೇಶಿಸಬೇಕು ಎಂದು ಕೋರಿದ್ದರು. ಈ ಮನವಿಯನ್ನು ಹೈಕೋರ್ಟ್ ಇತ್ತೀಚೆಗೆ ಪುರಸ್ಕರಿಸಿದೆ.

ಹೆಚ್ಚುವರಿ ಶುಲ್ಕದ ಮರು ಪಾವತಿಗೆ ಕೋರಿ ಕಾಲೇಜಿನ ಇತರ ಹಲವು ವಿದ್ಯಾರ್ಥಿಗಳು ಹೈಕೋರ್ಟ್‌ಗೆ ಈ ಹಿಂದೆ ಎರಡು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಅವುಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ಪೀಠ, ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಹೆಚ್ಚುವರಿ ಶುಲ್ಕವನ್ನು ಹಿಂದಿರುಗಿಸುವಂತೆ 2022ರ ಮಾರ್ಚ್ ಮತ್ತು ಸೆಪ್ಟೆಂಬರ್‌ನಲ್ಲಿ ಕಾಲೇಜಿಗೆ ಆದೇಶಿಸಿತ್ತು.

ವಿಚಾರಣೆ ವೇಳೆ, ರಾಜ್ಯ ಸರ್ಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಕೀಲರು, ಮೆಡಿಕಲ್​ ಸೀಟುಗಳ ಶುಲ್ಕ ರಚನಾ ನಿಯಮಗಳಿಗೂ ಹೆಚ್ಚು ಶುಲ್ಕ ಪಡೆದುಕೊಳ್ಳಬಾರದು ಎಂದು ರಾಜ್ಯ ಸರ್ಕಾರ ನಿಯಮಗಳನ್ನು ಜಾರಿ ಮಾಡಿದ್ದರು, ಅದಕ್ಕಿಂತ ಹೆಚ್ಚು ಶುಲ್ಕ ಪಡೆದುಕೊಳ್ಳುವಂತಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಇದನ್ನೂಓದಿ:ಯೂನಿಟ್‌ಗೆ 70 ಪೈಸೆ ವಿದ್ಯುತ್ ದರ ಹೆಚ್ಚಳಕ್ಕೆ ಅನುಮತಿಸಿದ ಕೆಇಆರ್​ಸಿ..

ABOUT THE AUTHOR

...view details