ಬೆಂಗಳೂರು: ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಎಸ್ಎಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಯಾವುದೇ ಬಲವಂತದ ಕಾನೂನು ಕ್ರಮ ಜರುಗಿಸುವುದು ಬೇಡವೆಂದು ಹೈಕೋರ್ಟ್ ಗುರುವಾರ ಆದೇಶಿಸಿತು. ಈ ಆದೇಶದಿಂದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಭಟ್ ಅವರಿಗೆ ಸದ್ಯ ರಿಲೀಫ್ ಸಿಕ್ಕಂತಾಗಿದೆ.
ಪ್ರಕರಣ ರದ್ದು ಕೋರಿ ಭಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಶ್ ರೈ ಅವರಿದ್ದ ರಜಾಕಾಲದ ಏಕ ಸದಸ್ಯ ಪೀಠವು, ನ್ಯಾಯಾಲಯದ ಮುಂದಿನ ವಿಚಾರಣೆಯತನಕ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಸರಕಾರದ ಪರ ವಾದ ಮಂಡಿಸಿದ ಎಸ್ಪಿಪಿಗೆ ಸೂಚನೆ ನೀಡಿತು. ಪ್ರತಿವಾದಿಗಳಾದ ರಾಜ್ಯ ಸರಕಾರ ಮತ್ತು ದೂರುದಾರರಿಗೆ ನೋಟಿಸ್ ನೀಡಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ಭಟ್ ವಿರುದ್ದ ಎಫ್ಐಆರ್ ಹಾಕಿರುವುದಕ್ಕೆ ರಾಜಕೀಯಪ್ರೇರಿತ ಕಾರಣವಿದೆ. ಅವರು ಯಾವುದೇ ಪ್ರಚೋದನಕಾರಿ ಅಥವಾ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದಡಿ ವಾಸ್ತವ ಅಂಶಗಳ ಬಗ್ಗೆ ಮಾತನಾಡಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಪ್ರಕರಣದ ಹಿನ್ನೆಲೆ: ಕಳೆದ ಭಾನುವಾರ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ನಡೆದ ಹನುಮ ಜಯಂತಿಯ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಕಲ್ಲಡ್ಕ ಪ್ರಭಾಕರ ಭಟ್, ಹಿಂದೆ ತಲಾಖ್ ತಲಾಖ್ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಿದ್ದರು. ದಿನಕ್ಕೊಬ್ಬ ಗಂಡ ಬದಲಾಗುತ್ತಿದ್ದ. ನಿಮಗೆ ಕಾಯಂ ಗಂಡನನ್ನು ಕೊಟ್ಟಿದ್ದೇ ಮೋದಿ ಸರಕಾರ. ತಲಾಖ್ ರದ್ದು ಮಾಡಿ ನಿಮಗೆ ಗೌರವ ತಂದುಕೊಟ್ಟಿದ್ದೇ ಹಿಂದೂ ಧರ್ಮ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಕುರಿತು ಹೋರಾಟಗಾರ್ತಿ ನಜ್ಮಾ ನಜೀರ್ ಚಿಕ್ಕನೇರಳೆ ನೀಡಿದ ದೂರಿನನ್ವಯ ಐಪಿಸಿ ಸೆಕ್ಷನ್ 354, 294, 509,153, 295, 295ಎ, 298 ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಇದನ್ನೂ ಓದಿ:ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ವಿರುದ್ಧ ಎಫ್ಐಆರ್ ದಾಖಲು