ಬೆಂಗಳೂರು:ನಾಡಗೀತೆ ಹಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಸಂಬಂಧ ಸಮಗ್ರ ಮಾಹಿತಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ದಿ.ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರವು 2022ರ ಸೆ.25ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ಧೀಕ್ಷಿತ್ ಅವರಿದ್ದ ಪೀಠ, ಈ ಸಂಬಂಧ ವಿವರಾಗಿ ಅಧ್ಯಯನ ನಡೆಸಿ ಸಮರ್ಪಕ ಮಾಹಿತಿ ನೀಡುವಂತೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.
ವಿಚಾರಣೆ ವೇಳೆ ಸರ್ಕಾರಿ ವಕೀಲರು, ಕುವೆಂಪು ಅವರು ಕೆಲವೊಂದು ಷರತ್ತು ವಿಧಿಸಿ ಸಿನಿಮಾದಲ್ಲಿ ನಾಡಗೀತೆ ಬಳಸಲು ಮತ್ತು ರಾಗ ಸಂಯೋಜಿಸಲು ಅನುಮತಿ ನೀಡಿದ್ದಾರೆ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕುವೆಂಪು ಅವರು ಅನುಮತಿ ನೀಡಿರುವುದು ನಿಜವೇ? ಎಂದು ಅರ್ಜಿದಾರ ಕಿಕ್ಕೇರಿ ಪರ ವಕೀಲರನ್ನು ಪ್ರಶ್ನಿಸಿದರು. ಕಿಕ್ಕೇರಿ ಪರ ವಕೀಲರು, ಕುವೆಂಪು ಸಾಹಿತ್ಯ ಬಳಕೆಗೆ ಮಾತ್ರ ಅನುಮತಿ ನೀಡಿದ್ದಾರೆ ಹೊರತು ಸಂಗೀತ ಸಂಯೋಜನೆಗೆ ಅಲ್ಲ ಎಂದು ವಿವರಿಸಿದರು.
ಈ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ನ್ಯಾಯಾಲಯ ತಿಳಿಯಬೇಕಿದೆ. ನಿಮ್ಮ ಕಕ್ಷಿದಾರರು ಲಭ್ಯವಿದ್ದರೆ ಅವರನ್ನು ಕರೆಯಿಸಿ ಎಂದು ಸೂಚಿಸಿದರು. ಇದೇ ವೇಳೆ ಕೋರ್ಟ್ ಹಾಲ್‌ನಲ್ಲಿ ಕಿಕ್ಕೇರಿ ಕೃಷ್ಣ ಮೂರ್ತಿ ಹಾಜರಿದ್ದನ್ನು ತಿಳಿದು, ಅವರಿಂದಲೇ ಹೆಚ್ಚಿನ ಮಾಹಿತಿ ಪಡೆದುಕೊಂಡಿತು. ನ್ಯಾಯಪೀಠಕ್ಕೆ ವಿವರ ನೀಡಿದ ಕಿಕ್ಕೇರಿ, ಕುವೆಂಪು ಅವರು ವಾಸ್ತವವಾಗಿ ಸಿನಿಮಾಕ್ಕೆ ನಾಡಗೀತೆಯ ಸಾಲು ಬಳಸಲು ಅನುಮತಿ ನೀಡಿದ್ದರು. ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಅವರು ಕಲ್ಯಾಣಿ ರಾಗದಲ್ಲಿ ಸಂಗೀತ ಸಂಯೋಜಿಸಿದ್ದಾರೆ. ಅಶ್ವತ್ಥ್ ಅವರು ಉದಯ ರವಿಚಂದ್ರಿಕೆ ರಾಗ ಮತ್ತು ಅನಂತಸ್ವಾಮಿ ಅವರು ಮಾಯಾ ಮಾಳವ ಗೋಳ ಸಂಗೀತದಲ್ಲಿ ರಾಗ ಸಂಯೋಜಿಸಿದ್ದಾರೆ. ಇದಲ್ಲದೆ, ಇನ್ನು ಹಲವು ರಾಗದಲ್ಲಿ ನಾಡಗೀತೆಯನ್ನು ಹಾಡಬಹುದಾಗಿದೆ ಎಂದರು.