ಬೆಂಗಳೂರು: ರಾಜ್ಯದಲ್ಲಿರುವ ಅಪರೂಪದ ‘ಗ್ರೇಟ್ ಇಂಡಿಯನ್ ಬಸ್ಟರ್ಡ್’(ಜಿಐಬಿ) ಪಕ್ಷಿ ಸಂಕುಲದ ರಕ್ಷಣೆ ಮತ್ತು ಅಭಿವೃದ್ಧಿಗೆ ಸಲಹೆ ನೀಡಲು ರಚಿಸಲಾಗಿರುವ ಸಲಹಾ ಸಮಿತಿಯನ್ನು ಪುನರ್ ರಚಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಕುರಿತು ಬಳ್ಳಾರಿಯ ಪರಿಸರವಾದಿ ಎಡ್ವರ್ಡ್ ಸಂತೋಷ್ ಮಾರ್ಟಿನ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಜನವರಿ 22ರಂದು ಅರ್ಜಿ ವಿಚಾರಣೆ ನಡೆಸಿದ್ದ ಪೀಠ, ಜಿಐಬಿ ಪಕ್ಷಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸರ್ಕಾರ ರಚಿಸಿರುವ ಸಲಹಾ ಸಮಿತಿ ಬಗ್ಗೆ ಹೈಕೋರ್ಟ್ ಬೇಸರ ವ್ಯಕ್ತಪಡಿಸಿತ್ತು. ಸಮಿತಿಯಲ್ಲಿನ 6 ಮಂದಿ ಸದಸ್ಯರ ಪೈಕಿ ನಾಲ್ವರು ಪಕ್ಷಿ ವಿಜ್ಞಾನ ಕ್ಷೇತ್ರದಲ್ಲಿ ಪರಿಣಿತಿ ಹೊಂದಿಲ್ಲ. ಆ ಕ್ಷೇತ್ರದ ಪರಿಣಿತರನ್ನು ಸಮಿತಿಯ ಸದಸ್ಯರಾಗಿ ನೇಮಿಸಬೇಕಿದೆ. ಆದ್ದರಿಂದ ಸಮಿತಿಯ ಸದಸ್ಯರ ನೇಮಕಕ್ಕೆ ಸಂಬಂಧಿಸಿದ ಮೂಲ ಕಡತ ಮತ್ತು ಸಮಿತಿ ಸಭೆಗಳ ನಡಾವಳಿಯನ್ನು ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು.
ಅರ್ಜಿ ಮತ್ತೆ ವಿಚಾರಣೆಗೆ ಬಂದಾಗ ಸರ್ಕಾರಿ ವಕೀಲರು, ಜ. 15ರಂದು ಸಮಿತಿ ನಡೆಸಿದ ಸಭೆಯ ನಡಾವಳಿಯನ್ನು ಕೋರ್ಟ್‌ಗೆ ಸಲ್ಲಿಸಿದರು. ಇದನ್ನು ಗಮನಿಸಿದ ಪೀಠ, ಸಲೀಂ ಅಲಿ ಪಕ್ಷಿ ವಿಜ್ಞಾನ ಮತ್ತು ಪ್ರಕೃತಿ ಇತಿಹಾಸ ಕೇಂದ್ರ (ಎಸ್‌ಎಸಿಒಎನ್) ಜಿಐಬಿ ಸಂರಕ್ಷಣೆಗೆ ನೀಡಿರುವಂತಹ ಸಲಹೆ ಜಾರಿ ಮಾಡಲು ಸಮಿತಿ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಇತರೆ ವಿಚಾರಗಳ ಕಡೆಗೆ ಗಮನ ಹರಿಸಿದೆ ಎನ್ನುವುದು ನಡಾವಳಿಯಿಂದ ಸ್ಪಷ್ಟವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿತು.
ಓದಿ:ಬಿಜೆಪಿ ಸಭಾಪತಿ ಸ್ಥಾನದ ಆಕಾಂಕ್ಷಿಗಳಿಗೆ ಬಿಸಿ ತುಪ್ಪವಾಗಲಿದೆಯಾ ಜೆಡಿಎಸ್?
ಅಲ್ಲದೆ, ಸಮಿತಿಯಲ್ಲಿ ತಜ್ಞರು ಇರಬೇಕು ಹಾಗೂ ಜಿಐಬಿ ಸಂರಕ್ಷಣೆಗೆ ಸಮಗ್ರ ಸಲಹೆ ನೀಡಬೇಕು. ಆದರೆ ಸರ್ಕಾರ ರಚಿಸಿರುವುದು ತಜ್ಞರ ಸಮಿತಿ ಅಲ್ಲ. ಸದಸ್ಯರು ತಜ್ಞರ ಮಾದರಿಯಲ್ಲಿ ವರ್ತಿಸಿಲ್ಲ. ತಜ್ಞ ಸಮಿತಿ ಮಾಡುವ ಕೆಲಸ ಇಲ್ಲಿ ಆಗಿಲ್ಲ. ಬಳ್ಳಾರಿ ಭಾಗದಲ್ಲಿ ಜಿಐಬಿ ಸಂಖ್ಯೆಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿಲ್ಲ. ಕೆಲ ಸಂದರ್ಭದಲ್ಲಿ ಹಕ್ಕಿಗಳು ಕಾಣಿಸಿಕೊಂಡ ಆಧಾರದ ಮೇಲೆ ಮಾಹಿತಿ ಸಂಗ್ರಹಿಸಲಾಗಿದೆ. ಜಿಐಬಿ ನಿರ್ದಿಷ್ಟ ಸಂಖ್ಯೆ, ವಾಸಸ್ಥಾನ ಮತ್ತು ಅವುಗಳಿಗೆ ಇರುವ ಅಪಾಯದ ಬಗ್ಗೆ ಅಧ್ಯಯನ ನಡೆಸಿ ಮೇಲ್ವಿಚಾರಣೆ ನಡೆಸಬೇಕು. ಆದ್ದರಿಂದ ಪ್ರತಿಷ್ಠಿತ ಸಂಸ್ಥೆಯಿಂದಲೇ ಸಮಿತಿ ನೇಮಕ ಮಾಡಬೇಕಿದ್ದು, ಅದಕ್ಕಾಗಿ ಹಾಲಿ ಸಮಿತಿಯನ್ನು ಪುನರ್ ರಚಿಸಬೇಕೆಂದು ಸರ್ಕಾರಕ್ಕೆ ನಿರ್ದೇಶಿಸಿ, ಫೆ. 2ಕ್ಕೆ ವಿಚಾರಣೆ ಮುಂದೂಡಿತು.