ಬೆಂಗಳೂರು :ಕಂದಾಯ ಇಲಾಖೆ ಅಧೀನದ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಾಖಲೆಗಳ ನೋಂದಣಿಗಾಗಿ ಅಳವಡಿಸಿರುವ ಕಾವೇರಿ 2.೦ ತಂತ್ರಾಂಶದ ಕುರಿತು ಜನತೆಗೆ ತಿಳಿಯುವಂತಾಗಬೇಕು. ಇದರ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಸಾಫ್ಟ್‌ವೇರ್ ಬಳಕೆಯ ಅರಿವು ಮೂಡಿಸಬೇಕು ಎಂದು ಕಂದಾಯ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಹುದ್ದೆಗಳು ಮಂಜೂರಾಗದ ಕಡೆಗಳಲ್ಲಿ ಕೆಲವು ಸಬ್ ರಿಜಿಸ್ಟ್ರಾರ್‌ಗಳು ಸೇವೆ ಸಲ್ಲಿಸಿ ವೇತನ ಪಡೆದ ಆರೋಪ ಸಂಬಂಧ ನಗರದ ಹಲವು ಸಬ್ ರಿಜಿಸ್ಟ್ರಾರ್‌ಗಳ ವಿರುದ್ಧ ಪ್ರಕರಣ ದಾಖಲಿಸಿರುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರಕ್ಕೆ ಈ ನಿರ್ದೇಶನ ನೀಡಿ ವಿಚಾರಣೆಯನ್ನು ಜು.19ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಖುದ್ದು ಹಾಜರಿದ್ದ ಕಂದಾಯ ಇಲಾಖೆ ಪ್ರಧಾನ ಕಾರ್ಯದಶಿ ವಿ.ರಶ್ಮಿ, ನ್ಯಾಯಾಲಯದ ಆದೇಶದಂತೆ ಕಾವೇರಿ ತಂತ್ರಾಂಶ ರೂಪಿಸಿ ಜಾರಿಗೆ ತಂದು ದಾಖಲೆಗಳ ನೋಂದಣಿಯಲ್ಲಿ ಮಾನವ ಹಸ್ತಕ್ಷೇಪವನ್ನು ನಿಯಂತ್ರಿಸಲಾಗಿದೆ. ದಾಖಲೆಗಳಿಗೆ ಸಹಿ ಹಾಕಲು ಹಾಗೂ ಬೆರಳಚ್ಚುಗಳನ್ನು ಒದಗಿಸುವಾಗ ಮಾತ್ರ ಜನರು ಸಬ್ ರಿಜಿಸ್ಟ್ರಾರ್‌ಗಳ ಮುಂದೆ ಹಾಜರಾಗಬೇಕಾಗುತ್ತದೆ ಎಂದು ವಿವರಿಸಿದರು.
ಅಲ್ಲದೆ, ಸಬ್ ರಿಜಿಸ್ಟ್ರಾರ್ ಕಚೇರಿ ಕಾರ್ಯ ನಿರ್ವಹಣೆಯಲ್ಲಿ ನ್ಯಾಯಾಲಯವು ಗುರುತಿಸಿದ್ದ ಲೋಪಗಳನ್ನು ಸರಿಪಡಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಎಚ್ಚರವಹಿಸಲಾಗಿದೆ. ನೋಂದಣಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.