ಬೆಂಗಳೂರು :ನಗರದ ಸುತ್ತಲಿನ ಉದ್ದೇಶಿತ ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್) ಮೊದಲನೇ ಹಂತದ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಎಲ್ಲ ನಿರ್ದೇಶನಗಳನ್ನು ಸರ್ಕಾರ ಮತ್ತು ಬಿಡಿಎ ಪಾಲನೆ ಮಾಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಯೋಜನೆ ಪ್ರಶ್ನಿಸಿ ಲೆಫ್ಟಿನೆಂಟ್ ಕರ್ನಲ್ ಪಿ ಆರ್ ರೈ ಮತ್ತಿತರರು ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಎಸ್ ಸಿ ಶರ್ಮ ನೇತೃತ್ವದ ವಿಭಾಗೀಯ ಪೀಠ, ಸುಪ್ರೀಂ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.
ಬಿಡಿಎ ಕೈಗೆತ್ತಿಕೊಂಡಿರುವ ಪಿಆರ್‌ಆರ್ ಯೋಜನೆ ಮತ್ತು ಅದಕ್ಕೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಅರ್ಜಿದಾರರು ಈ ಅರ್ಜಿ ಸಲ್ಲಿಸಿದ್ದಾರೆ. ಭೂಸ್ವಾಧೀನದಿಂದ ಸಮಸ್ಯೆಗೆ ಒಳಗಾದ ವ್ಯಕ್ತಿಗೆ ಕಾನೂನಿನ ಅಡಿ ಲಭ್ಯವಿರುವ ಪರಿಹಾರ ಪಡೆಯುವುದಕ್ಕೆ ಹಕ್ಕು ಹೊಂದಿರುತ್ತಾರೆ. ಮತ್ತೊಂದೆಡೆ ಇದೇ ಯೋಜನೆಯು ಸುಪ್ರೀಂಕೋರ್ಟ್ ಮುಂದೆ ನ್ಯಾಯಾಂಗ ಪರಾಮರ್ಶೆಗೆ ಒಳಪಟ್ಟಿತ್ತು.
ಯೋಜನೆಗೆ ಸಂಬಂಧಿಸಿದಂತೆ ಬಿಡಿಎ ಮತ್ತು ಎಂ ಕೆ ಸುಧಾಕರ್ ನಡುವಿನ ಸಿವಿಲ್ ಮೇಲ್ಮನವಿಯಲ್ಲಿ 2019ರಲ್ಲಿ ಸುಪ್ರೀಂಕೋರ್ಟ್ ಕೆಲ ಮಾನದಂಡ ರೂಪಿಸಿದೆ. ಪೆರಿಫೆರಲ್ ರಿಂಗ್ ರಸ್ತೆ ಮೊದಲನೇ ಹಂತದ ನಿರ್ಮಾಣಕ್ಕೆ ಹಲವು ನಿರ್ದೇಶನಗಳನ್ನು ನೀಡಿದೆ.
ಆ ನಿರ್ದೇಶನಗಳನ್ನು ಸರ್ಕಾರ, ಬಿಡಿಎ ಮತ್ತು ಅದರ ವಿಶೇಷ ಭೂಸ್ವಾಧೀನ ಅಧಿಕಾರಿ, ಭಾರತೀಯ ಹೆದ್ದಾರಿ ಪ್ರಾಧಿಕಾರವು ಪಾಲಿಸಬೇಕಾಗುತ್ತದೆ. ಆದ್ದರಿಂದ ಬಿಡಿಎ ಸೇರಿ ಅರ್ಜಿಯಲ್ಲಿನ ಎಲ್ಲಾ ಪ್ರತಿವಾದಿಗಳು ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಆದೇಶಿಸಿ ಪೀಠ ಅರ್ಜಿ ಇರ್ತ್ಯಥಪಡಿಸಿತು.