ಕರ್ನಾಟಕ

karnataka

ETV Bharat / state

ಫುಟ್‌ಬೋರ್ಡ್​ನಿಂದ ಬಿದ್ದು ಮೃತಪಟ್ಟ ನಿರ್ವಾಹಕನ ಕುಟುಂಬಕ್ಕೆ ಪರಿಹಾರ ನೀಡಲು ವಿಮಾ ಕಂಪನಿಗೆ ಹೈಕೋರ್ಟ್ ಸೂಚನೆ - ಮೇಲ್ಮನವಿ ವಿಚಾರಣೆ

Compensation to bus conductor: ಫುಟ್‌ಬೋರ್ಡ್‌ನಿಂದ ಕೆಳಗೆ ಬಿದ್ದು ಖಾಸಗಿ ಬಸ್ ನಿರ್ವಾಹಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾ ಕಂಪನಿಯೇ ಮೃತನ ಕುಟುಂಬದವರಿಗೆ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್‌ ತಿಳಿಸಿದೆ.

high court
ಹೈಕೋರ್ಟ್

By ETV Bharat Karnataka Team

Published : Nov 17, 2023, 7:10 AM IST

ಬೆಂಗಳೂರು: ಖಾಸಗಿ ಬಸ್ ನಿರ್ವಾಹಕ ಫುಟ್‌ಬೋರ್ಡ್‌ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾ ಕಂಪನಿ ಪರಿಹಾರ ನೀಡಬೇಕು ಎಂದು ಹೈಕೋರ್ಟ್​ ಆದೇಶಿಸಿತು. ಖಾಸಗಿ ಬಸ್‌ವೊಂದರ ಮಾಲೀಕ ಟಿ.ಶಾಂತಕುಮಾರ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.

ಮೃತಪಟ್ಟ ವ್ಯಕ್ತಿ ಬಸ್‌ ಕ್ಲೀನರ್ ಆಗಿದ್ದು ಅವರು ವಿಮಾ ಪಾಲಿಸಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ವಿಮಾ ಕಂಪನಿ ವಾದವನ್ನು ತಿರಸ್ಕರಿಸಿದ ಹೈಕೋರ್ಟ್‌, ಅಪಘಾತ ನಡೆದ ದಿನದಂದು ನಿರ್ವಾಹಕನ ಕೆಲಸವನ್ನು ಮೃತನು ನಿರ್ವಹಿಸುತ್ತಿರುವುದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ ಎಂದು ಹೇಳಿತು. 8.58 ಲಕ್ಷ ರೂ. ಪರಿಹಾರ ಪಾವತಿಯ ಹೊಣೆಯನ್ನು ಬಸ್‌ ಮಾಲೀಕನಿಗೆ ಹೊರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಿ, ವಿಮಾ ಕಂಪನಿಯೇ ಮೃತನ ಕುಟುಂಬದವರಿಗೆ ಪರಿಹಾರ ಪಾವತಿಸಬೇಕು ಎಂದು ತಿಳಿಸಿದೆ.

ಅದರಂತೆ ಎಂಟು ವಾರದಲ್ಲಿ ಪರಿಹಾರ ಮೊತ್ತವನ್ನು ಠೇವಣಿ ಇಡಬೇಕು. ನಂತರ ಆ ಮೊತ್ತವನ್ನು ನ್ಯಾಯಾಧೀಕರಣವು ಮೃತನ ಕುಟುಂಬದವರಿಗೆ ಬಿಡುಗಡೆ ಮಾಡಬೇಕು. ನ್ಯಾಯಾಧೀಕರಣದ ಆದೇಶದಂತೆ ಬಸ್‌ ಮಾಲೀಕರು ಏನಾದರೂ ಠೇವಣಿಯಿಟ್ಟಿದ್ದರೆ ಅದನ್ನು ಅವರಿಗೆ ಹಿಂದಿರುಗಿಸಬೇಕು ಎಂದು ಆದೇಶಿಸಿದೆ.

ಸಾಮಾನ್ಯವಾಗಿ, ಪ್ರಯಾಣಿಕರನ್ನು ಇಳಿಸಲು ಮತ್ತು ಹತ್ತಲು ಅನುಕೂಲ ವ್ಯವಸ್ಥೆ ಮಾಡಿಕೊಡುವುದು ಕಂಡಕ್ಟರ್‌ ಕರ್ತವ್ಯ, ಚಾಲಕನಿಗೆ ನಿಲ್ದಾಣದಲ್ಲಿ ಬಸ್‌ ನಿಲ್ಲಿಸಲು ಮತ್ತು ಮುಂದಕ್ಕೆ ಹೋಗಲು ಸೂಚನೆ ನೀಡುವ ಕೆಲಸ ನಿರ್ವಹಿಸುವುದು ಕ್ಲೀನರ್‌ ಕರ್ತವ್ಯಲ್ಲ. ಈ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿ ಅಪಘಾತ ನಡೆದ ದಿನದಂದು ಪ್ರಯಾಣಿಕರಿಗೆ ಬಸ್ ಹತ್ತಲು ಮತ್ತು ಇಳಿಯಲು ಅನುಕೂಲಕರವಾದ ವ್ಯವಸ್ಥೆ ಮಾಡಿಕೊಡುತ್ತಿದ್ದರು. ಬಸ್ ನಿಲ್ಲಿಸಲು ಮತ್ತು ಮುಂದಕ್ಕೆ ಚಲಾಯಿಸಲು ಚಾಲಕನಿಗೆ ಸೂಚನೆ ನೀಡುತ್ತಿದ್ದರು. ಹೀಗಾಗಿ, ಅವರೇ ಬಸ್ ಕಂಡಕ್ಟರ್ ಎಂಬುದು ಸಾಬೀತಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಮೂಡಿಗೆರೆ ತಾಲೂಕಿನ ಪೀಲಾಪುರ ಗೇಟ್ ಬಸ್ ನಿಲ್ದಾಣದಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಬಸ್‌ ಚಲಾಯಿಸಿದ ಹಿನ್ನೆಲೆಯಲ್ಲಿ ಫುಟ್‌ಬೋಡ್‌ನಲ್ಲಿ ನಿಂತಿದ್ದ ನಿರ್ವಾಹಕ ಕೆಳಗೆ ಬಿದ್ದಿದ್ದಾನೆ. ಈ ವೇಳೆ ತಲೆಗೆ ಗಾಯಗಳಾಗಿ ಸಾವನ್ನಪ್ಪಿದ್ದಾನೆ. ಹಾಗಾಗಿ, ಪ್ರಕರಣದಲ್ಲಿ ವಿಮಾ ಕಂಪನಿಯೇ ಮೃತನ ಕುಟುಂಬವರಿಗೆ ಪರಿಹಾರ ಪಾವತಿಸಬೇಕು ಎಂದು ಆದೇಶದಲ್ಲಿ ಹೈಕೋರ್ಟ್‌ ತಿಳಿಸಿದೆ.

ಪ್ರಕರಣದ ಹಿನ್ನೆಲೆ:ಚಿಕ್ಕಮಗಳೂರಿನ ತರಿಕೆರೆ ತಾಲೂಕಿನ ನಿವಾಸಿ ಟಿ.ಶಾಂತಕುಮಾರ್ ಎಂಬವರು ಖಾಸಗಿ ಬಸ್‌ವೊಂದರ ಮಾಲೀಕರಾಗಿದ್ದಾರೆ. ಆ ಬಸ್‌ನಲ್ಲಿ ಲೋಹಿತ್ ಕುಮಾರ್ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದರು. 2018ರ ಫೆ.5 ರಂದು ಪೀಲಾಪುರ ಗೇಟ್ ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬಸ್‌ನ ಫುಟ್‌ಬೋರ್ಡ್‌ನಲ್ಲಿ ನಿಂತಿದ್ದ ಲೋಹಿತ್‌ (35), ಆಕಸ್ಮಿಕವಾಗಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

"ಲೋಹಿತ್ ತಾಯಿ ಮತ್ತು ಸಹೋದರ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಲೋಹಿತ್ ಬಸ್ಸಿನ ಕಂಡಕ್ಟರ್ ಅಲ್ಲ, ಅವರು ಕೇವಲ ಕ್ಲೀನರ್ ಆಗಿದ್ದು, ವಿಮಾ ಪಾಲಿಸಿ ವ್ಯಾಪ್ತಿಗೆ ಒಳಪಡುವುದಿಲ್ಲ. ಬಸ್‌ ಮಾಲೀಕರು ವಿಮಾ ಪಾಲಿಸಿಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ" ಎಂದು ಬಸ್ಸಿಗೆ ವಿಮಾ ಸೌಲಭ್ಯ ಕಲ್ಪಿಸಿದ್ದ ಕಂಪನಿ ವಾದಿಸಿತ್ತು.

ಅದನ್ನು ಪರಿಗಣಿಸಿದ್ದ ಮೋಟಾರು ವಾಹನಗಳ ಪರಿಹಾರ ನ್ಯಾಯಾಧೀಕರಣ (ಎಂಎಸಿಟಿ), ಬಸ್‌ನ ಕ್ಲೀನರ್‌ನ ಅಪಾಯವನ್ನು ವಿಮಾ ಪಾಲಿಸಿಯಲ್ಲಿ ಒಳಗೊಂಡಿಲ್ಲ. ವಿಮಾ ಪಾಲಿಸಿಯ ನಿಯಮಗಳನ್ನು ಬಸ್‌ ಮಾಲೀಕರು ಉಲ್ಲಂಘಿಸಿದ್ದಾರೆ. ಆದ್ದರಿಂದ, ಅವರೇ ಮೃತನ ಸಾವಿಗೆ ಪರಿಹಾರ ಪಾವತಿಸಲು ಜವಾಬ್ದಾರಿಯಾಗಿದ್ದು, ಮೃತ ಲೋಹಿತ್ ಅವರ ತಾಯಿ ಮತ್ತು ಸಹೋದರನಿಗೆ 8,58,500 ರೂ. ಪರಿಹಾರ ಪಾವತಿಸಬೇಕು ಎಂದು 2019ರ ಆ.6 ರಂದು ಆದೇಶಿಸಿತ್ತು.

ಇದನ್ನೂ ಓದಿ:ಸಂಚಾರಿ ನಿಯಮ ಪಾಲಿಸದ ಚಾಲಕರಿಂದ ಅಪಘಾತ ಹೆಚ್ಚಳ: ಹೈಕೋರ್ಟ್ ಕಳವಳ

ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೆಲ್ಮನವಿ ಸಲ್ಲಿಸಿದ್ದ ಶಾಂತ ಕುಮಾರ್‌, ಮೃತ ಲೋಹಿತ್ ಬಸ್ಸಿನಲ್ಲಿ ಕಂಡಕ್ಟರ್ ಆಗಿದ್ದರು. ಈ ಅಂಶವನ್ನು ನ್ಯಾಯಾಧೀಕರಣ ಪರಿಗಣಿಸಿಲ್ಲ. ವಿಮಾ ಪಾಲಿಸಿಯ 28ನೇ ಷರತ್ತಿನ ಅನ್ವಯ ಪಾಲಿಸಿ ವ್ಯಾಪ್ತಿಗೆ ಬಸ್‌ ಚಾಲಕ, ನಿರ್ವಾಹಕ ಮತ್ತು ಕ್ಲೀನರ್‌ ಒಳಪಡುತ್ತಿದ್ದರು. ಹಾಗಾಗಿ, ಮೃತನ ಕುಟುಂಬದವರಿಗೆ ಪರಿಹಾರ ಪಾವತಿಸುವ ಹೊಣೆ ವಿಮಾ ಕಂಪನಿಯದ್ದಾಗಿದೆ ಎಂದು ವಾದಿಸಿದ್ದರು. ಈ ವಾದವನ್ನು ವಿಮಾ ಕಂಪನಿ ಅಲ್ಲಗೆಳೆದಿತ್ತು.

ABOUT THE AUTHOR

...view details