ಬೆಂಗಳೂರು: ಭಾರತೀಯ ವಾಸ್ತುಶಿಲ್ಪ ಪರಿಷತ್‌ಗೆ (ಸಿಎಐ) ರಾಜ್ಯ ಸರ್ಕಾರಗಳ ವತಿಯಿಂದ ಸದಸ್ಯರನ್ನು ನೇಮಿಸುವ ಮತ್ತು ನಾಮ ನಿರ್ದೇಶನ ಮಾಡುವುದಕ್ಕೆ ಅನುಸರಿಸಬೇಕಾದ ನಿರ್ದಿಷ್ಟ ಮಾನದಂಡಗಳನ್ನು ತುರ್ತಾಗಿ ಪ್ರಕಟಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಸಿಎಐ ಸದಸ್ಯ ನಾಮನಿರ್ದೇಶನ/ಆಯ್ಕೆಗೆ ನಡೆಸುವ ಸಂದರ್ಶನಕ್ಕೆ ತನ್ನನ್ನು ಆಹ್ವಾನಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಶರಣ್ ದೇಸಾಯಿ ಎಂಬುವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ವಾಸ್ತುಶಿಲ್ಪ ಕಾಯ್ದೆಯ ಪ್ರಕಾರ ಸಿಎಐ ಕಾರ್ಯಕಾರಿ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಆಯ್ಕೆಗೆ ಮಾನದಂಡಗಳಿವೆ. ಅವರು ಸಿಎಐ ಸದಸ್ಯರಲ್ಲಿ ಒಬ್ಬರಾಗಿರುತ್ತಾರೆ. ಆದರೆ, ಸಿಐಎಗೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುವ ಸದಸ್ಯರ ನಾಮ ನಿರ್ದೇಶನ ಮತ್ತು ನೇಮಕಾತಿಗೆ ಮಾನದಂಡಗಳು ಇಲ್ಲ. ಹೀಗಾಗಿ ಪ್ರತಿ ರಾಜ್ಯದಿಂದ ಸಿಎಐ ಸದಸ್ಯರ ನೇಮಕಾತಿ/ನಾಮ ನಿರ್ದೇಶನ ಮಾಡುವಾಗ ಅರ್ಹತೆ ಮತ್ತು ಅನುಭವಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ಅನುಸರಿಸಬೇಕಾದ ನಿರ್ದಿಷ್ಟ ಮಾನದಂಡಗಳನ್ನು ಪ್ರಕಟಿಸಲು ಕೇಂದ್ರ ಸರ್ಕಾರ ತುರ್ತು ಕ್ರಮ ಜರುಗಿಸಬೇಕು.
ಕೇಂದ್ರ ಮಾನದಂಡ ಪ್ರಕಟಿಸುವವರೆಗೆ ರಾಜ್ಯ ಸರ್ಕಾರವು ತನ್ನ ಸದಸ್ಯರ ಸ್ಥಾನ ಭರ್ತಿ ಮಾಡುವ ನಿಟ್ಟಿನಲ್ಲಿ ಮಾನದಂಡ ಪ್ರಕಟಿಸಬೇಕು. ಹಾಲಿ ಸದಸ್ಯರಾಗಿರುವ ವಿದ್ಯಾಧರ ಸದಾಶಿವ ಒಡೆಯರ್ ಅವರ ಅವಧಿ ಕೊನೆಗೊಂಡ ಬಳಿಕ ಸಿಎಐ ಸದಸ್ಯ ನೇಮಕಾತಿ/ನಾಮ ನಿರ್ದೇಶನಕ್ಕೆ ಅರ್ಜಿದಾರರ ಹೆಸರನ್ನು ರಾಜ್ಯ ಸರ್ಕಾರ ಪರಿಗಣಿಸಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಜತೆಗೆ, ಸಿಎಐ ವ್ಯವಹಾರಗಳಲ್ಲಿ ಸದಸ್ಯರು ಮುಖ್ಯ ಪಾತ್ರ ನಿರ್ವಹಿಸುತ್ತಾರೆ. ಅವರು ಹಣಕಾಸು ಮತ್ತು ಲೆಕ್ಕಪತ್ರಗಳನ್ನು ನಿರ್ವಹಿಸುತ್ತಾರೆ. ಶೈಕ್ಷಣಿಕ ಸಂಸ್ಥೆಗಳನ್ನು ತಪಾಸಣೆ ನಡೆಸುವ ಅಧಿಕಾರ ಸದಸ್ಯರಿಗೆ ಇದೆ.