ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರು ಎಂಬ ಊಹೆಯಲ್ಲಿ ಸ್ಥಳೀಯ ವಲಸೆ ಕಾರ್ಮಿಕರನ್ನು ಬಲವಂತವಾಗಿ ತೆರವು ಮಾಡಿದ ಪ್ರಕರಣದಲ್ಲಿ ಸೂರು ಕಳೆದುಕೊಂಡವರಿಗೆ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಲು ನಿಗದಿಪಡಿಸಿರುವ ತಲಾ 29 ಸಾವಿರ ಹಣವನ್ನೂ ಪರಿಹಾರವಾಗಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಕುರಿತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ರೊಜಾರಿಯೋ ವಾದಿಸಿ, ನಿರ್ಗತಿಕರಾದ ಕಾರ್ಮಿಕರಿಗೆ ತಲಾ 14.100 ರೂಪಾಯಿಯಂತೆ ಪರಿಹಾರ ನೀಡುತ್ತಿದೆ. ಆದರೆ ಪುನರ್ವಸತಿ ಕಲ್ಪಿಸುವ ವಿಚಾರವಾಗಿ ಈವರೆಗೆ ಸೂಕ್ತ ನಿರ್ಣಯ ಕೈಗೊಂಡಿಲ್ಲ.ಸೂರು ಕಳೆದುಕೊಂಡಿರುವ ಕಾರ್ಮಿಕರಿಗೆ ನಗರದ ಹೊರವಲಯ ಜಿಗಣಿ ಸಮೀಪ ಒಂದು ವರ್ಷದ ಮಟ್ಟಿಗೆ 10/10 ಅಳತೆಯ ತಾತ್ಕಾಲಿಕ ಶೆಡ್ ಗಳನ್ನು ತಲಾ 29 ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವುದಾಗಿ ಹೇಳಿದೆ. ಆದರೆ, ಅಕ್ರಮ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡಿರುವ ಕಾರ್ಮಿಕರು ಈಗಾಗಲೇ ಅಕ್ಕಪಕ್ಕದ ಬಾಡಿಗೆ ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ.