ಬೆಂಗಳೂರು:ರಾಯಚೂರು ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಮಂಜೂರು ಮಾಡಿರುವ ಜಾಗದಲ್ಲಿ ಸುರಿದಿರುವ ಕಟ್ಟಡ ತ್ಯಾಜ್ಯದಿಂದ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಚಾಟಿ ಬೀಸಿರುವ ಹೈಕೋರ್ಟ್, 15 ದಿನಗಳಲ್ಲಿ ತೆರವುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಕೋರ್ಟ್ ಕಟ್ಟಡ ನಿರ್ಮಾಣಕ್ಕೆ ಒದಗಿಸಿರುವ ನಿವೇಶನದಲ್ಲಿ ಸುರಿದಿರುವ ತ್ಯಾಜ್ಯ ತೆರವು ಮಾಡದಿರುವ ಕಾರಣದಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ. ಈ ಕುರಿತು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ರಾಯಚೂರು ವಕೀಲರ ಸಂಘದ ಉಪಾಧ್ಯಕ್ಷ ಪಿ. ಬಸವರಾಜ್ ಸೇರಿ 22 ಮಂದಿ ವಕೀಲರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ವಾದ ಆಲಿಸಿದ ಪೀಠ, ನ್ಯಾಯಾಲಯಗಳಿಗೆ ಮೂಲಕಸೌಕರ್ಯ ಒದಗಿಸುವ ವಿಚಾರದಲ್ಲಿ ವಿಳಂಬ ಮಾಡಬಾರದು ಮತ್ತು ಹಣಕಾಸು ಸಮಸ್ಯೆ ನೆಪ ಒಡ್ಡಬಾರದು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಆದರೆ, ಈ ಪ್ರಕರಣದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಜಾಗ ಮಂಜೂರಾಗಿ, ಹಣವೂ ಬಿಡುಗಡೆಯಾಗಿದೆ. ಹಾಗಿದ್ದೂ ತ್ಯಾಜ್ಯ ತೆರವು ಮಾಡದೆ ಕಾಮಗಾರಿ ಆರಂಭವಾಗದೇ ಇರುವುದು ದುರದೃಷ್ಟಕರ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ರಮಕೈಗೊಂಡು, ನ್ಯಾಯಾಲಯಕ್ಕೆ ಮಂಜೂರಾಗಿರುವ ಜಾಗದಲ್ಲಿ ಬಿದ್ದಿರುವ ಕಟ್ಟಡ ತ್ಯಾಜ್ಯವನ್ನು 15 ದಿನಗಳಲ್ಲಿ ತೆರವುಗೊಳಿಸಬೇಕು. ಹಾಗೆಯೇ ಒಂದು ತಿಂಗಳಲ್ಲಿ ಆ ಜಾಗಕ್ಕೆ ಕಾಂಪೌಂಡ್ ಗೋಡೆ ನಿರ್ಮಿಸಿಕೊಡಬೇಕು. ಅದೇ ರೀತಿ 3 ತಿಂಗಳ ಒಳಗೆ ನ್ಯಾಯಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಬೇಕು ಎಂದು ಪೀಠ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು.
ಇದೇ ವೇಳೆ ಹಾಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ತುಂಬಾ ದುಸ್ಥಿತಿಯಲ್ಲಿದೆ ಎಂದು ರಾಯಚೂರು ಜಿಲ್ಲಾ ನ್ಯಾಯಾಧೀಶರು ಸಲ್ಲಿಸಿದ್ದ ವರದಿ ಪರಿಶೀಲಿಸಿದ ಪೀಠ, ಲೋಕೋಪಯೋಗಿ ಇಲಾಖೆಯ ಹಿರಿಯ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿ ಏಪ್ರಿಲ್ 16ಕ್ಕೆ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:ರಾಯಚೂರು ಜಿಲ್ಲಾ ನ್ಯಾಯಾಲಯ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಈಗಿನ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಹಳೆಯ ಜಿಲ್ಲಾ ಆಸ್ಪತ್ರೆ ಕಟ್ಟಡವಿದ್ದ 10.32 ಎಕರೆ ಜಾಗ ನೀಡಲಾಗಿದೆ. 2017-18ರಲ್ಲಿ 10 ಕೋ.ರೂ ಹಣ ಕೂಡ ಬಿಡುಗಡೆ ಮಾಡಲಾಗಿದೆ. ಆದರೆ, ಹಳೆ ಜಿಲ್ಲಾಸ್ಪತ್ರೆ ಕಟ್ಟಡ ನೆಲಸಮಗೊಳಿಸಿದ ಗುತ್ತಿಗೆದಾರರಿಗೆ ಅವರ ಕೆಲಸದ ಹಣ ನೀಡಿಲ್ಲ. ಹೀಗಾಗಿ ಕೆಡವಿದ ಹಳೆ ಕಟ್ಟಡದ ತ್ಯಾಜ್ಯ ತೆರವು ಮಾಡದೆ ಅದೇ ಜಾಗದಲ್ಲಿ ಬಿಡಲಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಹಲವು ಬಾರಿ ಮನವಿ ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ನ್ಯಾಯಾಲಯ ಸಂಕೀರ್ಣ ನಿರ್ಮಾಣವೂ ತಡವಾಗುತ್ತಿದೆ. ಹೀಗಾಗಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.