ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದ ಮೂಲಕ ಪಡೆದ ಬಿ.ಟೆಕ್ ಪದವಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (AICTE) ಅನುಮೋದನೆ ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಸಹಾಯಕ ಎಂಜಿನಿಯರ್ ನೌಕರಿ ಕಳೆದುಕೊಂಡಿದ್ದ ವ್ಯಕ್ತಿಗೆ ಮತ್ತೆ ಉದ್ಯೋಗ ನೀಡುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ಚಿಕ್ಕಮಗಳೂರಿನ ಕಲ್ಯಾಣ ನಗರ ನಿವಾಸಿ ಕೆ.ಆರ್ ದೇವರಾಜು ಎಂಬುವರು ಕೆಎಸ್ಒಯುನಿಂದ ಬಿ.ಟೆಕ್ ಪದವಿ ಪಡೆದು ಅದರ ಆಧಾರದ ಮೇಲೆ ಮಂಡಳಿಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿ 5 ವರ್ಷ ಸೇವೆ ಸಲ್ಲಿಸಿದ್ದರು. ಆದರೆ. ಕೆಎಸ್ಒಯು ನೀಡಿದ್ದ ಬಿಟೆಕ್ ಪದವಿಗೆ ಎಐಸಿಟಿಇ ಮಾನ್ಯತೆ ನೀಡದ ಹಿನ್ನೆಲೆಯಲ್ಲಿ ಮಂಡಳಿ ಏಕಾಏಕಿ ಕೆಲಸದಿಂದ ತೆಗೆದು ಹಾಕಿತ್ತು. ಉದ್ಯೋಗಕ್ಕೆ ಕುತ್ತು ಬಂದ ಹಿನ್ನೆಲೆಯಲ್ಲಿ ದೇವರಾಜು ಹೈಕೋರ್ಟ್ ಮೆಟ್ಟಿಲೇರಿದ್ದರು.