ಬೆಂಗಳೂರು: ಫೇಸ್ಬುಕ್, ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ನಕಲಿ ಥೆರಪಿಸ್ಟ್‌ಗಳ ನಿಯಂತ್ರಣಕ್ಕೆ ಸರ್ಕಾರ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ಸಲಹೆ ನೀಡಿದೆ.
ವ್ಯಕ್ತಿಯೊಬ್ಬರಿಗೆ ಇನ್‌ಸ್ಟಾಗ್ರಾಂ ಪೇಜ್ ಮೂಲಕ ಮಾನಸಿಕ ಒತ್ತಡ ನಿವಾರಣೆಗೆ ಥೆರಪಿ ತರಗತಿ ನಡೆಸಿ 3.15 ಲಕ್ಷ ರೂ. ಪಡೆದು ವಂಚಿಸಿದ ಆರೋಪ ಸಂಬಂಧ ಮಹಿಳೆ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ನಿರಾಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಸರ್ಕಾರಕ್ಕೆ ಈ ಸಲಹೆ ನೀಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ‘ಥೆರಪಿ ಮತ್ತು ಥೆರಪಿಸ್ಟ್‌ಗಳು’ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲ ಮಾದರಿಯ ಥೆರಪಿ ನೀಡುವುದಾಗಿ ಅವರು ಪೋಸು ಕೊಡುತ್ತಾರೆ. ಅವರು ಯಾವುದೇ ನೈತಿಕತೆ ಹಾಗೂ ನಿಯಮಗಳಡಿ ನಿಯಂತ್ರಣಕ್ಕೆ ಒಳಪಟ್ಟಿರುವುದಿಲ್ಲ. ಹೆಚ್ಚುತ್ತಿರುವ ನಕಲಿ ಥೆರಪಿಸ್ಟ್‌ಗಳಿಂದ ಅಮಾಯಕರು ಬಲಿಯಾಗುತ್ತಿದ್ದಾರೆ.
ಆದ್ದರಿಂದ ನಕಲಿ ಥೆರಪಿಸ್ಟ್‌ಗಳ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಕ್ರಮ ಜರುಗಿಸಲು ಇದು ಸಕಾಲ ಎಂದು ನ್ಯಾಯಪೀಠ ಹೇಳಿದೆ. ಬೆಂಗಳೂರಿನ ಐಟಿ ಉದ್ಯೋಗಿ ಪಿ.ಜೆ.ಶಂಕರ್ ಗಣೇಶ್ ಮತ್ತು ಸಂಜನಾ ಫರ್ನಾಂಡೀಸ್ ಅಲಿಯಾಸ್ ರವೀರಾ, ಡೇಟಿಂಗ್ ಆ್ಯಪ್ ‘ಟಿಂಡರ್’ ಮೂಲಕ ಪರಿಚಯವಾಗಿ ಚಾಟಿಂಗ್ ಮಾಡುತ್ತಿದ್ದರು.
ಒಂದು ದಿನ ಚಾಟಿಂಗ್ ಮಾಡುವ ವೇಳೆ ತಾನೂ ಸಂಪೂರ್ಣವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇನೆ ಎಂದು ಶಂಕರ್ ತಿಳಿಸಿದ್ದರು. ಈ ವೇಳೆ ತಾನು ‘ವೆಲ್‌ನೆಸ್ ಥೆರಪಿಸ್ಟ್’ ಆಗಿದ್ದು, ಇನ್‌ಸ್ಟಗ್ರಾಂನ ‘ಪಾಸಿವಿಟಿ-ಫಾರ್-360-ಲೈಫ್’ ಪೇಜ್‌ನನ್ನು ಪ್ರತಿನಿಧಿಸುತ್ತೇನೆ. ಮಾನಸಿಕ ಒತ್ತಡ ನಿವಾರಣೆಗೆ ತರಗತಿ ನಡೆಸುತ್ತೇನೆ ಎಂದು ಸಂಜನಾ ತಿಳಿಸಿದ್ದರು.
ಅದಕ್ಕೆ ಒಪ್ಪಿದ್ದ ಶಂಕರ್ ಇನ್‌ಸ್ಟಾಗ್ರಾಂ ಮೂಲಕ ಹಲವು ತರಗತಿಗಳಿಗೆ ಹಾಜರಾಗಿ ಒಟ್ಟು 3.15 ಲಕ್ಷ ಹಣ ವರ್ಗಾಯಿಸಿದ್ದರು. ಈ ಮಧ್ಯೆ ಸಂಜನಾ ಅವರನ್ನು ಭೇಟಿ ಮಾಡಲು ಆಸಕ್ತಿ ತೋರಿಸಿದ್ದ ಶಂಕರ್, ಅಶ್ಲೀಲ ಸಂದೇಶ ಕಳುಹಿಸಿದ್ದರು.
ಹಾಗಾಗಿ ಆತನ ಇನ್‌ಸ್ಟಾಗ್ರಾಂ ಖಾತೆಯನ್ನು ಸಂಜನಾ ಬ್ಲಾಕ್ ಮಾಡಿದ್ದರು. ನಂತರ ಸಂಜನಾ ಅವರ ಥೆರಪಿ ಸತ್ಯಾಸತ್ಯತೆ ಪರಿಶೀಲಿಸಿದಾಗ ಅಕೆ ವಿವಿಧ ಸಾಮಾಜಿಕ ಜಾಣದಲ್ಲಿ ಇದೇ ಮಾದರಿಯ 15 ಪ್ರೊಫೈಲ್ ಹೊಂದಿರುವ ಸಂಗತಿ ಶಂಕರ್ ಅವರಿಗೆ ಗೊತ್ತಾಯಿತು. ನಂತರ ವಂಚನೆ ಆರೋಪ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಅಡಿಯಲ್ಲಿ ಬೆಂಗಳೂರು ಉತ್ತರ ಸಿಇಎನ್ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ನಡೆಸಿದ್ದ ಪೊಲೀಸರು, ಸಂಜನಾ ವಿರುದ್ಧ ವಂಚನೆ ಮತ್ತು ಐಟಿ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಪ್ರಕರಣ ರದ್ದುಪಡಿಸುವಂತೆ ಕೋರಿ ಸಂಜನಾ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಆದರೇ, ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಅರ್ಜಿಯನ್ನ ನಿರಾಕರಿಸಿದೆ.
ಇದನ್ನೂ ಓದಿ:ಒಳಚರಂಡಿ ನೀರನ್ನು ಮಳೆ ನೀರು ಕಾಲುವೆಗೆ ಹರಿಸಿದ್ದಕ್ಕೆ ಸಮಗ್ರ ತನಿಖೆಗೆ ಆದೇಶಿಸಿದ ಹೈಕೋರ್ಟ್