ಕರ್ನಾಟಕ

karnataka

ETV Bharat / state

ಮುರುಘಾ ಮಠ, ಶಿಕ್ಷಣ ಸಂಸ್ಥೆಯಲ್ಲಿ ಹೇಗೆ ಸಂಬಳ ನೀಡಲಾಗುತ್ತಿತ್ತು?: ಮಾಹಿತಿ ನೀಡಲು ಹೈಕೋರ್ಟ್ ಸೂಚನೆ - ಮುರುಘಾ ಶರಣರು

ಅರ್ಜಿದಾರರ ಸಮಸ್ಯೆಯಿಂದ‌ ಉದ್ಯೋಗಿಗಳನ್ನು ಉಪವಾಸಕ್ಕೆ ದೂಡಬಾರದು. ಅರ್ಜಿದಾರರ ಬಂಧನಕ್ಕೆ ಮೊದಲು ಹೇಗೆ ಸಂಬಳ ನೀಡಲಾಗುತ್ತಿತ್ತು ಎಂಬುದರ ಕುರಿತು ವಿವರವಾದ ಮಾಹಿತಿಯನ್ನು ಸಲ್ಲಿಸಿಸುವಂತೆ ಹೈಕೋರ್ಟ್ ಹೇಳಿದೆ

high-court-directed-to-provide-information-about-salary-system-in-murugha-mutt
ಮುರುಘಾ ಮಠ, ಶಿಕ್ಷಣ ಸಂಸ್ಥೆಯಲ್ಲಿ ಹೇಗೆ ಸಂಬಳ ನೀಡಲಾಗುತ್ತಿತ್ತು?: ಮಾಹಿತಿ ನೀಡಲು ಹೈಕೋರ್ಟ್ ಸೂಚನೆ

By

Published : Sep 28, 2022, 7:11 PM IST

ಬೆಂಗಳೂರು: ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘರಾಜೇಂದ್ರ ಶರಣರ ಬಂಧನಕ್ಕೂ ಮುನ್ನ ಮಠ ಮತ್ತು ಮಠದ ಅಧೀನದ ಶಿಕ್ಷಣ ಸಂಸ್ಥೆಯಲ್ಲಿ ಸಿಬ್ಬಂದಿಗೆ ಯಾವ ರೀತಿಯಲ್ಲಿ ವೇತನ ನೀಡಲಾಗುತ್ತಿತ್ತು ಎಂಬುದನ್ನು ತಿಳಿಸಲು ಹೈಕೋರ್ಟ್ ಸೂಚನೆ ನೀಡಿದೆ.

ಪೋಕ್ಸೋ ಮತ್ತು ಜಾತಿ ನಿಂದನೆ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶರಣರು ಮಠದ ಬ್ಯಾಂಕ್‌ ಖಾತೆಗಳ ಚೆಕ್‌ಗಳಿಗೆ ಸಹಿ ಹಾಕುವುದಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಸಂದೀಪ್ ಪಾಟೀಲ್, ಮಠ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ವೇತನ ನೀಡಬೇಕಾದರೆ ಮಠದ ಏಕೈಕ ಟ್ರಸ್ಟಿ ಆಗಿರುವ ಶಿವಮೂರ್ತಿ ಶರಣರು ಚೆಕ್​ಗಳಿಗೆ ಸಹಿ ಮಾಡಬೇಕು. ಪ್ರತಿ ತಿಂಗಳು 200 ಚೆಕ್​ಗಳಿಗೆ ಸಹಿ ಮಾಡಬೇಕು. ಇಲ್ಲವಾದಲ್ಲಿ ವೇತನ ಬಿಡುಗಡೆ ಆಗುವುದಿಲ್ಲ. ಹೀಗಾಗಿ ಚೆಕ್​ಗಳಿಗೆ ಸಹಿ ಹಾಕಲು ಅನುಮತಿ ನೀಡಬೇಕು ಎಂದು ವಿವರಿಸಿದರು.

ಇದನ್ನೂ ಓದಿ:ಮುರುಘಾ ಶರಣರಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ

ಅಲ್ಲದೇ, ಕರ್ನಾಟಕ ಕಾರಾಗೃಹ ಕಾಯಿದೆ 1963ರ ಸೆಕ್ಷನ್ 40ರ ಅಡಿ ಅರ್ಜಿದಾರರು ವಿಚಾರಣಾಧೀನ ಕೈದಿಯಾಗಿದ್ದು, ಚೆಕ್ ಮತ್ತು ಸಂಬಂಧಿತ ದಾಖಲೆಗಳಿಗೆ ಸಹಿ ಮಾಡಲು ಅವಕಾಶ ಮಾಡಿಕೊಡಬೇಕೆಂದೂ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರ ಸಮಸ್ಯೆಯಿಂದ‌ ಉದ್ಯೋಗಿಗಳನ್ನು ಉಪವಾಸಕ್ಕೆ ದೂಡಬಾರದು. ಅರ್ಜಿದಾರರ ಬಂಧನಕ್ಕೆ ಮೊದಲು ಹೇಗೆ ಸಂಬಳ ನೀಡಲಾಗುತ್ತಿತ್ತು ಎಂಬುದರ ಕುರಿತು ವಿವರವಾದ ಮಾಹಿತಿಯನ್ನು ಸಲ್ಲಿಸಿಸುವಂತೆ ಅರ್ಜಿದಾರರ ಪರ‌ ವಕೀಲರಿಗೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ಇದನ್ನೂ ಓದಿ:ಬ್ಯಾಂಕ್​ ಚೆಕ್​ಗಳಿಗೆ ಸಹಿ ಹಾಕಲು ಅನುಮತಿ ಕೋರಿ ಮುರುಘಾ ಶರಣರಿಂದ ಹೈಕೋರ್ಟ್​ಗೆ ಅರ್ಜಿ

ABOUT THE AUTHOR

...view details