ಕರ್ನಾಟಕ

karnataka

ETV Bharat / state

ನಕಲಿ ದಾಖಲೆ ನೀಡಿ ಶ್ಯೂರಿಟಿ : ಆನ್ಲೈನ್​ ಮೂಲಕ ದಾಖಲೆಗಳ ಪರಿಶೀಲನೆಗೆ ಹೈಕೋರ್ಟ್​ ನಿರ್ದೇಶನ - ಈಟಿವಿ ಭಾರತ್ ಕನ್ನಡ ಸುದ್ದಿ

ಅಪರಾಧ ಪ್ರಕರಣಗಳಲ್ಲಿ ಜಾಮೀನಿಗಾಗಿ ಶ್ಯೂರಿಟಿ ನೀಡುವವರ ಸಂಪೂರ್ಣ ವಿವರವನ್ನು ಪರಿಶೀಲನೆಗೊಳಪಡಿಸಿ ಖಾತರಿಪಡಿಸಿಕೊಳ್ಳಬೇಕು ಎಂದು ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್​ ಮಾರ್ಗಸೂಚಿಗಳನ್ನು ನೀಡಿದೆ.

ಹೈಕೋರ್ಟ್​
ಹೈಕೋರ್ಟ್​

By

Published : Oct 11, 2022, 6:25 PM IST

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಜಾಮೀನು ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿ ಶ್ಯೂರಿಟಿ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಜಾಮೀನಿಗಾಗಿ ಶ್ಯೂರಿಟಿ ನೀಡುವವರ ಸಂಪೂರ್ಣ ವಿವರವನ್ನು ಪರಿಶೀಲನೆಗೊಳಪಡಿಸಿ ಖಾತರಿಪಡಿಸಿಕೊಳ್ಳಬೇಕು ಎಂದು ವಿಚಾರಣಾ ನ್ಯಾಯಾಲಯಗಳಿಗೆ ಮಾರ್ಗಸೂಚಿಗಳನ್ನು ನೀಡಿದೆ. ಅಲ್ಲದೆ, ಈ ಸಂಬಂಧ ಅಗತ್ಯವಿರುವ ತಾಂತ್ರಿಕ ನೆರವನ್ನು ಕಂದಾಯ ಇಲಾಖೆ ಹಾಗೂ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ಕ್ಕೆ ಸೂಚನೆ ನೀಡಿದೆ.

ಮೃತಪಟ್ಟ ವ್ಯಕ್ತಿಯ ಹೆಸರು, ಆಧಾರ್​ ಕಾರ್ಡ್​ ಹಾಗೂ ಜಮೀನಿನ ನಕಲಿ ದಾಖಲೆಗಳನ್ನು ನೀಡಿ ಜಾಮೀನು ಪಡೆದಿರುವ ಪ್ರಕರಣ ರದ್ದುಕೋರಿ ಸಂಬಂಧಿಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ. ಸೂರಜ್​ ಗೋವಿಂದರಾಜು ಅವರಿದ್ದ ಪೀಠ ಈ ಮಾರ್ಗಸೂಚಿಗಳನ್ನು ನೀಡಿ ಅರ್ಜಿಯನ್ನು ಇತ್ಯರ್ಥ ಪಡಿಸಿದೆ.

ಅಲ್ಲದೆ, ಈ ಕುರಿತು ಹೈಕೋರ್ಟ್​ನ ರಿಜಿಸ್ಟ್ರಾರ್​ ಜನರಲ್​ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಪಡೆದು ಕ್ರಿಮಿನಲ್​ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಗಳಿಗೆ ಸುತ್ತೋಲೆಗಳನ್ನು ಹೊರಡಿಸಬೇಕು. ನ್ಯಾಯಾಲಯಗಳ ಕಂಪ್ಯೂಟರ್​ ವಿಭಾಗದ ರಿಜಿಸ್ಟ್ರಾರ್​ ಅವರು ಸೆಂಟ್ರಲ್​ ಪ್ರೊಜಕ್ಟ್ಸ್​ ಕೋ-ಆರ್ಡಿನೇಟರ್​(ಸಿಪಿಸಿ) ಮೂಲಕ ಎಲ್ಲ ಮಾಹಿತಿ ಲಭ್ಯವಾಗುವಂತೆ ಮಾಡಬೇಕು.

ಜತೆಗೆ, ಶ್ಯೂರಿಟಿ ನೀಡುವುದಕ್ಕೆ ನ್ಯಾಯಾಲಯಗಳಿಗೆ ಬರುವವರ ಕುರಿತು ಈ ಹಿಂದೆ ಯಾವುದೇ ಪ್ರಕರಣದಲ್ಲಿ ಶ್ಯೂರಿಟಿ ನೀಡಿದ್ದಾರೆಯೇ? ಎಂಬುದನ್ನು ಪರಿಶೀಲನೆಗೊಳಪಡಿಸಿಬೇಕು. ಅಲ್ಲದೆ, ಶ್ಯೂರಿಟಿಗಾಗಿ ಪದೇ ಪದೆ ಹಾಜರಾಗಿದ್ದಾರೆಯೇ? ಎಂಬುದನ್ನು ಖಾತರಿ ಪಡಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.

ಪ್ರಮುಖ ಮಾರ್ಗಸೂಚಿಗಳು

- ಜಾಮೀನಿಗಾಗಿ ಬರುವ ಶ್ಯೂರಿಟಿಯ ಆಸ್ತಿ ಪತ್ರಗಳನ್ನು ಸರ್ಕಾರದ ವೆಬ್​ಸೈಟ್​ಗಳಾದ ಕಾವೇರಿ ಹಾಗೂ ಭೂಮಿಯಲ್ಲಿ ಪರಿಶೀಲನೆಗೊಳಪಡಿಸಿಕೊಳ್ಳಬೇಕು. ಜತಗೆ, ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಮತ್ತೊಮ್ಮೆ ಖಾತರಿ ಪಡಿಸಿಕೊಳ್ಳಬೇಕು.

- ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಶ್ಯೂರಿಟಿ ನೀಡುವ ಜಮೀನುಗಳ ಕುರಿತು ಮಾಹಿತಿ ನೀಡುವುದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ತರಬೇತಿ ನೀಡಬೇಕು. ಹೈಕೋರ್ಟ್​ನ ರಿಜಿಸ್ಟ್ರಾರ್​ ಜನರಲ್​​ ಅವರು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಮನ್ವಯ ಬೆಳೆಸಬೇಕು.

- ನಗದು ಶ್ಯೂರಿಟಿ ನೀಡಿದಲ್ಲಿ ಅಂತಹ ವ್ಯಕ್ತಿ ನೀಡಿರುವ ವಿಳಾಸದಲ್ಲಿ ನೆಲೆಸಿದ್ದಾರೆಯೇ? ಎಂಬುದಕ್ಕೆ ಸಂಬಂಧಿಸಿದಂತೆ ಖಾತ್ರಿಪಡಿಸುವುದಕ್ಕಾಗಿ ಆಧಾರ್​ ಕಾರ್ಡ್​, ಪಡಿತರ ಚೀಟಿ, ಮತದಾರರ ಗುರುತಿ ಚೀಟಿ ಸೇರಿದಂತೆ ಇತರೆ ದಾಖಲೆಗಳನ್ನು ಆರೋಪಿತರು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು.

- ನಕಲಿ ಆಧಾರ್​ ಕಾರ್ಡ್​ಗಳನ್ನು ಸಲ್ಲಿಸುವುದಕ್ಕೆ ತಡೆಯುವುದಕ್ಕಾಗಿ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ಅವರು ಸಹಕಾರ ನೀಡಬೇಕು. ಜತೆಗೆ, ಅಗತ್ಯವಿರುವ ಸೌಲಭ್ಯಗಳು ಮತ್ತು ಅಗತ್ಯ ಉಪಕರಣಗಳನ್ನು ಮತ್ತು ಸಾಫ್ಟ್ ವೇರ್​ನ್ನು ಎಲ್ಲ ನ್ಯಾಯಾಲಯಗಳಿಗೆ ಲಭ್ಯವಾಗುವಂತೆ ಮಾಡಬೇಕು.

- ಶ್ಯೂರಿಟಿ ನೀಡುವವರ ಕುರಿತು ನ್ಯಾಯಾಲಯಗಳ ಸಾಫ್ಟ್​ವೇರ್​ನಲ್ಲಿ ಸಂಬಂಧಪಟ್ಟ ಪೊಲೀಸ್​ ಠಾಣೆಯ ಹೆಸರು, ಅಪರಾಧ ಸಂಖ್ಯೆ, ಆರೋಪಿತರ ಹೆಸರು ಸೇರಿದಂತೆ ವಿವರಗಳನ್ನು ನಮೂದು ಮಾಡಬೇಕು.

- ಜಾಮೀನು ನೀಡುವ ಸಂದರ್ಭದಲ್ಲಿ ಸಂಬಂಧ ಪಟ್ಟ ನ್ಯಾಯಾಲಯಗಳು ಸಾಕ್ಷಿದಾರರ ಭಾವಚಿತ್ರ, ಸಹಿ, ಹೆಬ್ಬೆರಳಿನ ಗುರುತನ್ನು ಹಾಕಿ ದೃಢೀಕರಣ ಮಾಡಿರುವ ದಾಖಲೆ ಪರಿಗಣಿಸಬೇಕು. ಜತೆಗೆ, ಸ್ವಯಂ ದೃಢೀಕರಿಸಿರುವ ಆಧಾರ್ ಕಾರ್ಡ್‌ನ ನಕಲು ಪ್ರತಿ ಸಲ್ಲಿಸಬೇಕು.

- ಯಾವುದೇ ಸಂಸ್ಥೆಯ ನೌಕರರು ಶ್ಯೂರಿಟಿ ನೀಡಿದಲ್ಲಿ ತಾನು ಕೆಲಸ ಮಾಡುವ ಉದ್ಯೋಗದಾತ ಸಂಸ್ಥೆ ನೀಡುವ ಗುರುತಿನ ಚೀಟಿ, ವೇತನ ಚೀಟಿ ಸಲ್ಲಿಸಬೇಕು. ಜತೆಗೆ, ಇದಕ್ಕೆ ಉದ್ಯೋಗದಾತ ಸಂಸ್ಥೆಯ ಉಸ್ತುವಾರಿ ಸಹಿಯೊಂದಿಗೆ ದೃಢೀಕರಣ ಮಾಡಿರಬೇಕು.

- ಶ್ಯೂರಿಟಿಯನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಸಹಿ, ಹೆಬ್ಬರಳಿನ ಗುರುತಿನ ಚೀಟಿ ಹಾಗೂ ಭಾವಚಿತ್ರದೊಂದಿಗಿನ ದಾಖಲೆಗಳನ್ನು ಪಡೆದುಕೊಳ್ಳಬೇಕು.

- ಶ್ಯೂರಿಟಿ ಪಡೆದುಕೊಳ್ಳುವ ಸಂದರ್ಭದಲ್ಲಿ ನ್ಯಾಯಾಲಯಗಳು, ಶ್ಯೂರಿಟಿದಾರನ ಸಂಪೂರ್ಣ ಹೆಸರು, ತಂದೆಯ ಹೆಸರು, ವಯಸ್ಸು, ವೃತ್ತಿ ಮತ್ತು ಸೇರಿದಂತೆ ಸಂಪೂರ್ಣ ಅಂಚೆ ವಿಳಾಸವನ್ನು ದಾಖಲಿಸಿಕೊಳ್ಳಬೇಕು. ಬ್ಯಾಂಕ್​ ಪಾಸ್​ ಬುಕ್​ ಅಥವಾ ಪಡಿತರ ಚೀಟಿ, ಆಧಾರ್​ ಕಾರ್ಡ್​ ಮತ್ತು ಇತರೆ ಗುರುತಿನ ಚೀಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

- ಸಂಬಂಧ ಪಟ್ಟ ನ್ಯಾಯಾಲಯದ ಅಧಿಕಾರಿಗಳು ಶ್ಯೂರಿಟಿ ನೀಡುವವರು ಕುರಿತಂತೆ ಮಾಸಿಕವಾಗಿ ದಾಖಲಿಸಿಕೊಂಡಿರುವ ವಿವರಗಳನ್ನು ಪರಿಶೀಲನೆಗೊಳಪಡಿಸಿಕೊಳ್ಳಬೇಕು.

- ಜಿಲ್ಲಾ ಪ್ರಧಾನ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರು ವಾರ್ಷಿಕ ತಪಾಸಣೆ ವೇಳೆ ಜಾಮೀನುದಾರರ ನೊಂದಣಿಯನ್ನು ಪರಿಶೀಲನೆಗೊಳಪಡಿಸಿಕೊಳ್ಳಬೇಕು. ವಿವಿಧ ಪ್ರಕರಗಳಲ್ಲಿ ಶ್ಯೂರಿಟಿದಾರರ ಹೇಳಿಕೆಗಳನ್ನು ಗಮನಿಸುತ್ತಿರಬೇಕು.

ಓದಿ:ವಿವಾದಿತ ಜಮೀನಿನಲ್ಲಿ ಸೋಲಾರ್​ ಸ್ಥಾವರ: ಅನುಮತಿ ನಿರಾಕರಿಸಿದ ಹೈಕೋರ್ಟ್​

ABOUT THE AUTHOR

...view details