ಬೆಂಗಳೂರು :ದೇಶದಲ್ಲಿ ಹವಾನಾ ಸಿಂಡ್ರೋಮ್ ಇರುವಿಕೆಗೆ ಸಂಬಂಧಿಸಿದಂತೆ ಮುಂದಿನ ಮೂರು ತಿಂಗಳಲ್ಲಿ ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಬೆಂಗಳೂರಿನ ನಿವಾಸಿ ಅಮರನಾಥ ಚಾಗು ಎಂಬುವರು 2021 ರಲ್ಲಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ಧೀಕ್ಷಿತ್ ಅವರಿದ್ದ ಪೀಠವು ಈ ಸೂಚನೆ ನೀಡಿ, ವಿಚಾರಣೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, "ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಮನವಿ ಅಥವಾ ದೂರು ಸಲ್ಲಿಸಿದ್ದಲ್ಲಿ ಅದನ್ನು ಅಧಿಕಾರಿಗಳು ಪರಿಗಣಿಸಬೇಕು ಎಂಬುದಾಗಿ ಸಂವಿಧಾನದ 350ನೇ ಪರಿಚ್ಛೇದಲ್ಲಿ ಹೇಳಲಾಗಿದೆ. ಆದ್ದರಿಂದ ನಮ್ಮ ಮನವಿಯನ್ನು ಪರಿಗಣಿಸಬೇಕು" ಎಂದು ನ್ಯಾಯಪೀಠಕ್ಕೆ ಕೋರಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸರ್ಕಾರದ ಪರ ವಕೀಲರು, ಸಲ್ಲಿಕೆಯಾಗುವ ದೂರುಗಳನ್ನು ಪರಿಗಣಿಸಿದಲ್ಲಿ ಅದರ ಪ್ರಾತಿನಿಧ್ಯವನ್ನು ಪರಿಗಣಿಸುವುದು ಮತ್ತು ಪರಿಗಣಿಸದಿರುವ ಸಂಬಂಧದ ಪ್ರಶ್ನೆ ಉದ್ಭವಿಸಲಿದೆ ಎಂದು ವಾದ ಮಂಡಿಸಿದ್ದರು. ಬಳಿಕ, ಅರ್ಜಿದಾರರ ಮನವಿ ನ್ಯಾಯಸಮ್ಮತವಾಗಿರುವುದರಿಂದ ಅದನ್ನು ಪರಿಶೀಲಿಸಲು ಕೇಂದ್ರ ಇಲಾಖೆಗಳಿಗೆ ತಿಳಿಸಲಾಗುವುದು. ಜತೆಗೆ, ಈ ಸಂಬಂಧ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ. ಅರ್ಜಿಯನ್ನು ವಿಲೇವಾರಿ ಮಾಡಿ ಆದೇಶಿಸಿದೆ.
ಇದನ್ನೂ ಓದಿ :ಬೆಂಗಳೂರಿನ ಶೌಚಾಲಯಗಳ ನಿರ್ವಹಣೆ ಕುರಿತು ಸರ್ಕಾರದ ಮೌನ : ಹೈಕೋರ್ಟ್ ತರಾಟೆ