ಬೆಂಗಳೂರು : ಸುಮಾರು 16 ವರ್ಷಗಳ ಹಿಂದೆ ಮನೆಯಲ್ಲಿ ನಡೆದಿದ್ದ ಕಳ್ಳತನದಿಂದ ಕೈ ತಪ್ಪಿದ್ದ ಫ್ರಾನ್ಸ್ ಮೇಡ್ ಪಿಸ್ತೂಲ್ ಹೈಕೋರ್ಟ್‌ನ ಆದೇಶದಿಂದ ಮತ್ತೆ ಮಾಲೀಕರ ಕೈಸೇರಿದೆ. ಪರವಾನಗಿ ಇಲ್ಲದೇ ಕಳುವಾಗಿದ್ದ ಪಿಸ್ತೂಲ್‌ನ್ನು ಹೊಂದಿದ್ದ ಆರೋಪದಲ್ಲಿ ಇಬ್ಬರು ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಿದ್ದರೂ, ತನ್ನ ಪಿಸ್ತೂಲ್ ಹಿಂದಿರುಗಿಸದ ಕ್ರಮ ಪ್ರಶ್ನಿಸಿ ಸಕಲೇಶಪುರದ ಬಳ್ಳೂರ್‌ಪೇಟ್‌ನ ನಿವಾಸಿ ಎಚ್.ಕೆ.ಲೋಕೇಶ್ ಎಂಬುವರು ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ನ್ಯಾಯಪೀಠ, ಪಿಸ್ತೂಲ್‌ನ್ನು ಪರವಾನಗಿ ಹೊಂದಿರುವ ಅರ್ಜಿದಾರರಿಗೆ ಹಸ್ತಾಂತರಿಸಬೇಕು ಎಂದು ಸೂಚನೆ ನೀಡಿ ಆದೇಶಿಸಿದೆ. ಜೊತೆಗೆ, ಅಕ್ರಮವಾಗಿ ಅರ್ಜಿದಾರರ ಪಿಸ್ತೂಲ್ ಹೊಂದಿದ್ದ ಆರೋಪದಲ್ಲಿ ಶಸ್ತ್ರಾಸ್ತ್ರಗಳ ಕಾಯಿದೆಯಡಿ ಶಿಕ್ಷೆಗೆ ಒಳಗಾಗಿರುವ ಅಬೀದ್ ಮತ್ತು ಗೀತಾ ಎಂಬುವರು ಈವರೆಗೂ ಪಿಸ್ತೂಲ್ ನಮ್ಮದೇ ಎಂದು ಕೋರಿ ಯಾವುದೇ ಅರ್ಜಿ ಸಲ್ಲಿಸಿಲ್ಲ.
ಅಲ್ಲದೇ, ಅರ್ಜಿದಾರರು ಪಿಸ್ತೂಲ್ ಪಡೆಯುವುದಕ್ಕೆ ಪರವಾನಗಿ ಹೊಂದಿದ್ದಾರೆ. ಆದ್ದರಿಂದ ಅರ್ಜಿದಾರರಿಗೆ ಪಿಸ್ತೂಲ್ ಬಿಡುಗಡೆಗೆ ಮಾಡಬೇಕು ಎಂದು ಹಾಸನದ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. ಅಲ್ಲದೇ, ಈ ಅಂಶವನ್ನು ಹಾಸನ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ಸೂಚನೆ ನೀಡಿರುವ ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು?:ಅರ್ಜಿದಾರರಾದ ಲೋಕೇಶ್ ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಈ ವೇಳೆ ಚಿನ್ನಾಭರಣ, ನಗದು, ಮೊಬೈಲ್ ಫೋನ್ ಹಾಗೂ ಪರವಾನಗಿ ಹೊಂದಿದ್ದ ಪಿಸ್ತೂಲ್ ಕಳುವಾಗಿದೆ ಎಂದು 2007ರಲ್ಲಿ ಸಕಲೇಶಪುರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಈ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಿದ್ದರು.
ಈ ನಡುವೆ ಅರ್ಜಿಯಲ್ಲಿ 2 ಮತ್ತು 3ನೇ ಪ್ರತಿವಾದಿಗಳಾದ ಸಲೀಮ್ ಅಬೀದ್ ಮತ್ತು ಗೀತಾ ರಮೇಶ್ ಎಂಬುವರ ವಿರುದ್ಧ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಆರೋಪದಲ್ಲಿ ಪ್ರಕರಣದ ದಾಖಲಿಸಿಕೊಂಡಿದ್ದರು. ಅಲ್ಲದೇ ಇಬ್ಬರೂ ಆರೋಪಿಗಳು ಅಕ್ರಮ ಶಸ್ತ್ರಾಸ್ತ್ರ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆ ಕಾಯಿದೆಗಳ ಅಡಿ ಶಿಕ್ಷೆಗೆ ಒಳಗಾಗಿದ್ದರು. ಈ ಪ್ರಕರಣದಲ್ಲಿ ಅರ್ಜಿದಾರರ ಪಿಸ್ತೂಲ್ ಸಾಕ್ಷ್ಯವನ್ನಾಗಿ ಪರಿಗಣಿಸಲಾಗಿತ್ತು.