ಬೆಂಗಳೂರು :ಸಾರ್ವಜನಿಕ ಹಣವನ್ನು ಬಳಕೆ ಮಾಡಿ ನಿರ್ಮಿಸುವ ಯಾವುದೇ ಯೋಜನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಎಚ್ಚರಿಕೆ ವಹಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಕಳಪೆ ಗುಣಮಟ್ಟದ ಪೊಲೀಸ್ ವಸತಿ ಗೃಹಗಳ ನಿರ್ಮಾಣ ಮಾಡಿದ್ದ ಗುತ್ತಿಗೆದಾರರ ಭದ್ರತಾ ಠೇವಣಿ ಹಿಂದಿರುಗಿಸಲು ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿಯನ್ನು ಸಲ್ಲಿಸಲಾಗಿತ್ತು. ಇದೀಗ ಈ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಆದೇಶಿಸಿದೆ.
ಮಂಡ್ಯ ಮತ್ತು ಚಾಮರಾಜನರದಲ್ಲಿ ಪೊಲೀಸ್ ವಸತಿ ಯೋಜನೆಯಡಿ ಕಳಪೆ ಗುಣಮಟ್ಟದ ಸಮುಚ್ಚಯ ನಿರ್ಮಾಣ ಮಾಡಿದ್ದ ಆರೋಪ ಹೊತ್ತಿರುವ ಪಿಜಿ ಶೆಟ್ಟಿ ಕನ್ಸಸ್ಟ್ರಕ್ಷನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಭದ್ರತಾ ಠೇವಣಿಗೆ ಬಿಡುಗಡೆ ಕೋರಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೆ, ಗುತ್ತಿಗೆದಾರರು ಕಳಪೆ ಗುಣಮಟ್ಟದ ಕಟ್ಟಡ ನಿರ್ಮಾಣ ಮಾಡಿದೆ. ಈ ಬಗ್ಗೆ ದೂರು ದಾಖಲಾಗಿದ್ದರೂ ಬಿಲ್ಗಳನ್ನು ಮಂಜೂರು ಮಾಡಿರುವ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಮಂಡಳಿಯ ಎಂಜನಿಯರ್ಗಳ ಕಾರ್ಯಕ್ಕೆ ಅಚ್ಚರಿ ವ್ಯಕ್ತಪಡಿಸಿದೆ.
ಜೊತೆಗೆ, ಇದು ಸರ್ಕಾರಿ ಯೋಜನೆಯಾಗಿದ್ದು, ಇದಕ್ಕೆ ಸಾರ್ವಜನಿಕರ ಹಣ ಬಳಕೆಯಾಗಿದೆ. ಹೀಗಾಗಿ ಸಾರ್ವಜನಿಕರ ಹಣದಲ್ಲಿ ನಿರ್ಮಾಣವಾಗುವ ಯೋಜನೆಗಳು ಕಳಪೆಯಾಗಿದ್ದಲ್ಲಿ ಸಹಿಸಲಾಗುವುದಿಲ್ಲ. ಅಲ್ಲದೆ, ಸಾರ್ವಜನಿಕ ಹಣವನ್ನು ಒಳಗೊಂಡಿರುವ ಯೋಜನೆಗಳನ್ನು ಮಾಡುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಗುಣಮಟ್ಟ ಕಾಯ್ದುಕೊಳ್ಳವಂತೆ ಎಚ್ಚರಿಕೆಯಿಂದ ನಿರ್ವಹಣೆ ಮಾಡುವಂತೆ ನೋಡಿಕೊಳ್ಳಬೇಕು. ಗುಣಮಟ್ಟ ಪರಿಶೀಲಿಸದೆ ಬಿಲ್ ಬಿಡುಗಡೆ ಮಾಡುವುದು, ಕಳಪೆಯಿದ್ದರೂ ಅನುಮೋದನೆ ನೀಡುವ ಎಂಜಿನಿಯರ್ಗಳ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಪೀಠ ಸೂಚನೆ ನೀಡಿ ಅರ್ಜಿ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ ಏನು? :ಅರ್ಜಿದಾರ ಕಂಪೆನಿಯು ಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ನಿಗಮದ ಅಡಿಯಲ್ಲಿ ಮಂಡ್ಯ ಮತ್ತು ಚಾಮರಾಜನಗರದಲ್ಲಿ 144 ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಸಂಬಂಧ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದಂತೆ ಕಾಮಗಾರಿ ಪ್ರಾರಂಭಕ್ಕೂ ಮುನ್ನ ನಿಗಮದಲ್ಲಿ ಕಂಪೆನಿ 1,15,13,500 ಭದ್ರತಾ ಠೇವಣಿ ಮಾಡಿತ್ತು. ಈ ನಡುವೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಬಿಲ್ಗಳನ್ನು ನಿಗಮ ಪಾವತಿ ಮಾಡಿತ್ತು. ಆದರೆ, ಕಾಮಗಾರಿ ಕಳಪೆಯಿದೆ ಎಂಬ ದೂರು ಬಂದ ತಕ್ಷಣ ಕಂಪೆನಿ ಭದ್ರತಾ ಠೇವಣಿ ಹಿಂಪಡೆಯುವುದಕ್ಕೆ ತಡೆ ಹಿಡಿದಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು, ಸಂಪೂರ್ಣ ಮೊತ್ತವನ್ನು ವಾರ್ಷಿಕ ಶೇ. 15 ರಂತೆ ಬಡ್ಡಿಯೊಂದಿಗೆ ಬಿಡುಗಡೆ ಮಾಡಬೇಕು ಎಂದು ಕೋರಿದ್ದರು.