ಬೆಂಗಳೂರು :ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಅನಧಿಕೃತ ಕಟ್ಟಡಗಳನ್ನು 3 ತಿಂಗಳಲ್ಲಿ ತೆರವು ಮಾಡಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಪಾಲಿಕೆಗೆ ನಿರ್ದೇಶಿಸಿದೆ.
ಈ ಕುರಿತು ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಪಾಲಿಕೆ ವ್ಯಾಪ್ತಿಯಲ್ಲಿರುವ ಅಕ್ರಮ ಕಟ್ಟಡಗಳ ಸರ್ವೇ ನಡೆಸಲಾಗಿದೆ. ಅವುಗಳ ಪೈಕಿ ಸುಮಾರು 16,386 ಕಟ್ಟಡಗಳ ಮಾಲೀಕರಿಗೆ ಬಿಬಿಎಂಪಿ ಕಾಯ್ದೆ ಸೆಕ್ಷನ್ 313 ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಅಕ್ರಮ ಕಟ್ಟಡಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ವಾದ ದಾಖಲಿಸಿಕೊಂಡ ಪೀಠ, ಬಿಬಿಎಂಪಿ ಸಿದ್ಧಪಡಿಸಿರುವ ಕ್ರಿಯಾ ಯೋಜನೆಯಂತೆಯೇ ಮೂರು ತಿಂಗಳಲ್ಲಿ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಜರುಗಿಸಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಇದನ್ನೂ ಓದಿ:ಮೈಸೂರು: ಕಲ್ಲಿನ ವಿಗ್ರಹ ಪೂಜಿಸಿ ಜನ ಮೋಸ ಹೋಗುತ್ತಾರೆಂದು ಭಗ್ನಗೊಳಿಸಿದ್ದ ಆರೋಪಿ ಬಂಧನ