ಬೆಂಗಳೂರು:ಪತ್ನಿಯ ನಡೆತೆಯ ಕುರಿತು ಸಂಶಯಪಟ್ಟು ತನ್ನ ಮಗುವಿಗೆ ಎರಡನೇ ಬಾರಿ ಡಿಎನ್‌ಎ ಪರೀಕ್ಷೆ ನಡೆಸಲು ಅನುಮತಿ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿರುವ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಇದು ಹೆಂಡತಿ ಮತ್ತು ಮಕ್ಕಳ ನೋಡಿಕೊಳ್ಳುವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಡಿಎನ್‌ಎ ಮಾದರಿಗಳನ್ನು ಎರಡನೇ ಬಾರಿಗೆ ಎಫ್‌ಎಸ್‌ಎಲ್ ಪರೀಕ್ಷೆಗಾಗಿ ಹೈದರಾಬಾದ್‌ಗೆ ರವಾನಿಸುವುದಕ್ಕಾಗಿ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ಮನವಿಯನ್ನು ತಿರಸ್ಕರಿಸಿ ಅರ್ಜಿ ವಜಾಗೊಳಿಸಿದೆ. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಅರ್ಹ ವೈದ್ಯರಿಂದ ಪರೀಕ್ಷೆಗೊಳಪಡಿಸಿ, ಅದರ ನಿರ್ದೇಶಕರು ಅನುಮೋದಿಸಿರುತ್ತಾರೆ. ಹೀಗಾಗಿ ಎರಡನೇ ಬಾರಿಗೆ ಡಿಎನ್‌ಎ ಪರೀಕ್ಷೆಗೆ ಒಳಪಡಿಸಬೇಕಾದ ಅಗತ ಉದ್ಭವಿಸುವುದಿಲ್ಲ ಎಂದು ತಿಳಿಸಿದೆ.
ಅಲ್ಲದೆ, ಸರ್ಕಾರಿ ಆಸ್ಪತ್ರೆ ಅಥವಾ ಪ್ರಯೋಗಾಲಯದಿಂದ ಬರುವ ವರದಿಗಳ ಫಲಿತಾಂಶವನ್ನು ಅನುಮಾನದಿಂದ ನೋಡುವುದಕ್ಕೆ ಸಾಧ್ಯವಿಲ್ಲ. ಜೊತೆಗೆ, ಫಲಿತಾಂಶ ಅರ್ಜಿದಾರರ ವಿರುದ್ಧವಿದೆ ಎಂಬ ಕಾರಣಕ್ಕೆ ಅವರ ಆರೋಪಗಳನ್ನು ಪರಿಗಣಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಈ ಅರ್ಜಿಯನ್ನು ಪುರಸ್ಕರಿಸಿದಲ್ಲಿ, ತಮ್ಮ ಪರವಾಗಿ ಫಲಿತಾಂಶ ಬರುವವರೆಗೂ ಮತ್ತೆ ಮತ್ತೆ ಅರ್ಜಿ ಸಲ್ಲಿಸುವ ಸಾಧ್ಯತೆಯಿರಲಿದೆ. ಹೇಗಾದರೂ ಪತ್ನಿಯ ವಿರುದ್ಧ ಸಂಶಯವನ್ನು ಸಾಬೀತುಪಡಿಸಲು, ಹೆಂಡತಿ ಮತ್ತು ಮಗುವನ್ನು ನೋಡಿಕೊಳ್ಳುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಬಯಸುತ್ತಿದ್ದು, ಅರ್ಜಿಯನ್ನು ಪರಿಗಣಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.