ಬೆಂಗಳೂರು:ನಗರದ ಕೋರಮಂಗಲದಲ್ಲಿ ಡಕಾಯಿತಿ ಮಾಡಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಮೂವರು ನೇಪಾಳ ಮೂಲದ ವ್ಯಕ್ತಿಗಳಿಗೆ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ. ಪ್ರಕರಣದಲ್ಲಿ ಜಾಮೀನು ಕೋರಿ ಕಮಲ್ ಜಾಜೋ ವಿಶ್ವಕರ್ಮ, ಜಾನಕಿ ಜೈಶಿ ಮತ್ತು ಸುನಿಲ್ ಬಹದ್ದೂರ್ ಶಶಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಕೆ. ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಆರೋಪಿತರು ಡಕಾಯಿತಿಯಂತಹ ಗಂಭೀರ ಸ್ವರೂಪದ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ನೇಪಾಳ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಶಾಶ್ವತವಾಗಿ ನೆಲೆಸಿರುವುದಾಗಿ ಹೇಳಿದ್ದಾರೆ. ಆದರೆ, ಅವರು ಇಲ್ಲಿನ ಶಾಶ್ವತ ನಿವಾಸಿಗಳು ಎಂಬುದಕ್ಕೆ ಯಾವುದೇ ದಾಖಲೆಗಳನ್ನು ನೀಡಿಲ್ಲ.
ಹೀಗಾಗಿ ಒಂದು ವೇಳೆ ಅರ್ಜಿ ಪುರಸ್ಕರಿಸಿ ಜಾಮೀನು ನೀಡಿದರೆ ಅವರು ಸಾಕ್ಷ್ಯಗಳನ್ನು ನಾಶಪಡಿಸಬಹುದು ಮತ್ತು ನೇಪಾಳಕ್ಕೆ ತಲೆಮರೆಸಿಕೊಂಡು ಹೋಗಬಹುದು. ಆದ್ದರಿಂದ ಪ್ರಕರಣದಲ್ಲಿ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ ಎಂಬ ಕಾರಣಕ್ಕೆ ಆರೋಪಿಗಳಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾ ಮಾಡಿದೆ.