ಬೆಂಗಳೂರು :ಬಾಲಕಿಯನ್ನು ಅಪಹರಣ ಮಾಡಿ ಸತತ ಅತ್ಯಾಚಾರವೆಸಗಿದ್ದ ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಜಾಮೀನು ಕೋರಿ ದಾವಣಗೆರೆ ತಾಲೂಕಿನ ಹೊಸಕುಂಡುವಾಡ ಗ್ರಾಮದ ಆರೋಪಿ ಎನ್. ಶ್ರೀನಿವಾಸ್ ಎಂಬಾತ ಅರ್ಜಿ ಸಲ್ಲಿಸಿದ್ದ. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ನ್ಯಾಯಪೀಠ ಅರ್ಜಿ ವಜಾಗೊಳಿಸಿತು.
ಸಂತ್ರಸ್ತ ಬಾಲಕಿ ಪರೀಕ್ಷೆಗೊಳಪಡಿಸಿದ್ದ ವೈದ್ಯಾಧಿಕಾರಿಗಳ ಮುಂದೆ ಆರೋಪಿಯ ವಿರುದ್ಧ ಹೇಳಿಕೆ ನೀಡಿದ್ದಾರೆ. ಮ್ಯಾಜಿಸ್ಟ್ರೇಟ್ ಮುಂದೆ ಸಿಆರ್‌ಪಿಸಿ 164 ಅಡಿಯಲ್ಲಿ ಹೇಳಿಕೆ ನೀಡುವ ಸಂಬಂಧ ಈ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದಾರೆ. ಆದರೆ ಪ್ರಕರಣ ಅತ್ಯಂತ ಗಂಭೀರ ಸ್ವರೂಪದ್ದು. ಹೀಗಾಗಿ ಅರ್ಜಿ ವಜಾಗೊಳಿಸುತ್ತಿರುವುದಾಗಿ ಅವರು ತಿಳಿಸಿದರು.
ಪ್ರಕರಣ ಸಂಬಂಧ ವಿಚಾರಣೆಯಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, "ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧದ ಆರೋಪಗಳು ನಿರಾಧಾರ. ತಪ್ಪಾಗಿ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಮುಂದೆ ನೀಡಿರುವ ಹೇಳಿಕೆಯಲ್ಲಿ ಅರ್ಜಿದಾರರ ಹೆಸರು ಹೇಳಿಲ್ಲ. ಪ್ರಕರಣ ತನಿಖೆ ಪೂರ್ಣಗೊಂಡಿದ್ದು, 2022ರ ಜೂನ್ ತಿಂಗಳಿನಿಂದ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು" ಎಂದು ಮನವಿ ಮಾಡಿದರು.
ಇದೇ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, "ಅಪ್ರಾಪ್ತೆಯನ್ನು ಅಪಹರಣ ಮಾಡಿ ಸತತ ಅತ್ಯಾಚಾರವೆಸಗಿರುವ ಕುರಿತು ವೈದ್ಯಕೀಯ ಸಾಕ್ಷ್ಯಾಧಾರಗಳಿವೆ. ಆರೋಪಿಯ ವಿರುದ್ಧ ಗಂಭೀರ ಆರೋಪವಿದೆ. ಹೀಗಾಗಿ ಅರ್ಜಿ ರದ್ದುಗೊಳಿಸಬೇಕು" ಎಂದರು.