ಬೆಂಗಳೂರು:ನಕಲಿ ಅಂಕಪಟ್ಟಿಗಳನ್ನು ಸಲ್ಲಿಸಿ ಶಿಕ್ಷಣ ಇಲಾಖೆಯಲ್ಲಿ ಸಹಾಯಕ ಉಪನ್ಯಾಸಕರ ಹುದ್ದೆಗಳ ಪಡೆದುಕೊಳ್ಳುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಇಬ್ಬರು ಆರೋಪಿಗಳ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ಮತ್ತು ಈ ಸಂಬಂಧದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ರದ್ದುಗೊಳಿಸಬೇಕು ಎಂದು ಕೋರಿ ಕಲಬುರಗಿಯ ಜಯನಗರದ ಬನಶಂಕರಿ ಕಾಲೋನಿಯ ಮಿಥುನ್ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೆಂಚಿಕೊಪ್ಪದ ಕೆ.ಹೆಚ್.ಕಾಂತರಾಜ ಎಂಬುವರು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.
ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾ.ಕೆ.ನಟರಾಜನ್ ಅವರಿದ್ದ ನ್ಯಾಯಪೀಠ, ಅರ್ಜಿದಾರರ ಶಿಕ್ಷಣ ಇಲಾಖೆಗೆ ಸಲ್ಲಿಸಿರುವ ದಾಖಲೆಗಳು ಅಸಲಿ ಎಂದು ಹೇಳುತ್ತಿದ್ದು, ಈ ಸಂಬಂಧ ಅಧೀನ ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿ ವಿಚಾರಣೆ ಎದುರಿಸಬೇಕು ಎಂದು ಸೂಚನೆ ನೀಡಿದ್ದು, ಅರ್ಜಿಗಳನ್ನು ವಜಾಗೊಳಿಸಿದೆ.
ಅಂಕಪಟ್ಟಿ ಅಸಲಿ ಎಂದು ವಾದಿಸಿದ್ದ ಅರ್ಜಿದಾರರು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ನಮ್ಮ ಕಕ್ಷಿದಾರರು ಮುಗ್ದರಾಗಿದ್ದು, ತಪ್ಪಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಿಕ್ಕಿಂನ ಈಸ್ಟರ್ನ್ ಇನ್‌ಸ್ಟಿಟ್ಯೂಟ್ ಫಾರ್ ಇಂಟಿಗ್ರೆಟೆಡ್ ಲರ್ನಿಂಗ್ ಇನ್ ಮ್ಯಾನೇಜ್‌ಮೆಂಟ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಆದರೆ, ಕರ್ನಾಟಕ ರಾಜ್ಯದ ಶಿಕ್ಷಣ ಇಲಾಖೆಯ ಸಮಿತಿ ಪರಿಶೀಲನೆ ವೇಳೆಗೆ ಸಿಕ್ಕಿಂ ಸರ್ಕಾರ ಆ ವಿವಿಯನ್ನು ಸ್ಥಗಿತಗೊಳಿಸಿದೆ. ಹೀಗಾಗಿ ಅಂಕ ಪಟ್ಟಿ ನಕಲಿ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಅಲ್ಲದೆ, ತನಿಖಾಧಿಕಾರಿಗಳು ಸಿಕ್ಕಿಂ ರಾಜ್ಯಕ್ಕೆ ಹೋಗಿ ಸ್ಳಯ ಪರಿಶೀಲನೆ ನಡೆಸಿಲ್ಲ. ಆದರೆ, ಸಿಕ್ಕಿಂ ರಾಜ್ಯ ಸರ್ಕಾರ ಕಳುಹಿಸಿರುವ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಪಟ್ಟಿ ಪಡೆದುಕೊಂಡಿದ್ದಾರೆ. ಅದರಲ್ಲಿ ನಾವು ಪದವಿ ಪಡೆದ ಕಾಲೇಜಿನ ಹೆಸರಿದ್ದು, 2006ರಲ್ಲಿ ನೋಂದಣಿಯಾಗಿದೆ. ಇದಾದ ಬಳಿಕ 2016ರಲ್ಲಿ ಸ್ಥಗಿತಗೊಂಡಿದೆ. ಹೀಗಿರುವಾಗ ಅಂಕಪಟ್ಟಿ ನಕಲಿ ಎನ್ನಲಾಗುವುದಿಲ್ಲ.
ಅಲ್ಲದೆ, ವಿಶ್ವವಿದ್ಯಾಲಯ ಸ್ಥಗಿತಗೊಳಿಸಿರುವ ಸಿಕ್ಕಿಂ ಸರ್ಕಾರದ ಕ್ರಮ ಪ್ರಶ್ನಿಸಿ ಸ್ಥಳೀಯ ಹೈಕೋರ್ಟ್‌ನಲ್ಲಿ ಪ್ರಶ್ನಿ ಮಾಡಲಾಗಿದೆ. ಆದ್ದರಿಂದ ಅರ್ಜಿದಾರರ ವಿರುದ್ಧ ವಿಚಾರಣೆ ಮುಂದುವರೆದರೆ ಕಾನೂನು ದುರ್ಬಳಕೆಯಾಗಲಿದೆ ಎಂದು ವಾದಿಸಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ಸರ್ಕಾರದ ಪರ ವಕೀಲರು, ಪ್ರಕರಣದ ತನಿಖೆ ನಡೆಸಿದ್ದ ತನಿಖಾಧಿಕಾರಿಗಳು ಸಿಕ್ಕಿಂ ರಾಜ್ಯದ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಪರಿಶೀಲಿಸಿದ್ದು, ಈಸ್ಟರ್ನ್ ಇನ್‌ಸ್ಟಿಟ್ಯೂಟ್ ಫಾರ್ ಇಂಟಿಗ್ರೆಟೆಡ್ ಲರ್ನಿಂಗ್ ಇನ್ ಮ್ಯಾನೇಜ್‌ಮೆಂಟ್ ವಿಶ್ವವಿದ್ಯಾಲಯವನ್ನು 2006ರಲ್ಲಿ ಅಧಿಸೂಚಿಸಲಾಗಿದೆ. ಆದರೆ, ಯಾವುದೇ ತರಗತಿಗಳನ್ನು ನಡೆಸಿ ಕಾರ್ಯಚರಣೆ ಮಾಡದ ಹಿನ್ನೆಲೆಯಲ್ಲಿ ಅಲ್ಲಿಯ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳ ಅನುದಾನ ಆಯೋಗ(ಯುಜಿಸಿ)ದಿಂದ ವಿಧಾನ ಮಂಡಲಕ್ಕೆ ಪತ್ರ ಬರೆದು ವಿವಿಯನ್ನು ಸ್ಥಗಿತಗೊಳಿಸುವಂತೆ ಕೋರಿತ್ತು. ಇದನ್ನು ಸಿಕ್ಕಿಂ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ಆದರೆ, ಹೈಕೋರ್ಟ್ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿತ್ತು.
ಅಲ್ಲದೆ, ಅರ್ಜಿದಾರರು ಅಂಕ ಪಟ್ಟಿಯನ್ನು ಹೊರತು ಪಡಿಸಿ ಪರೀಕ್ಷಾ ಶುಲ್ಕ ಪಾವತಿ ರಸೀದಿ ಸೇರಿದಂತೆ ಇನ್ನಿತರೆ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ. ಇದರಿಂದ ಅಂಕ ಪಟ್ಟಿ ನಕಲಿ ಎಂಬುದು ತಿಳಿಯಲಿದೆ. ಪ್ರಕರಣದಲ್ಲಿ ಅರ್ಜಿದಾರರು ತಪ್ಪಿತಸ್ಥರು ಎಂಬುದು ಗೊತ್ತಾಗಲಿದೆ. ಹೀಗಾಗಿ ಪ್ರಕರಣವನ್ನು ಎದುರಿಸಬೇಕಾಗಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ರಾಜ್ಯ ಶಿಕ್ಷಣ ಇಲಾಖೆ 2014ರಲ್ಲಿ ನಡೆಸಿದ್ದ ಸಹಾಯಕ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿದಾರ ಇಬ್ಬರು ಆರೋಪಿಗಳು ಆಯ್ಕೆಯಾಗಿದ್ದರು. ಮುಂದುವರೆದ ಪ್ರಕ್ರಿಯ ಭಾಗವಾಗಿ ಆರೋಪಿಗಳು ಶೈಕ್ಷಣಿಕ ದಾಖಲೆಗಳನ್ನು ಸಲ್ಲಿಸಿದ್ದರು. ದಾಖಲೆಗಳ ಪರಿಶೀಲನೆಗಾಗಿ ಶಿಕ್ಷಣ ಇಲಾಖೆ ಬೆಂಗಳೂರಿನ ವಿವೇಕಾನಂದ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬಿ.ಜಿ. ಭಾಸ್ಕರ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ದಾಖಲೆಗಳನ್ನು ಪರಿಶೀಲನೆಗೊಳಪಡಿಸಿತ್ತು.
ಅರ್ಜಿದಾರರರಾದ ಮಿಥುನ್ ಮತ್ತು ಕೆ.ಎಚ್.ಕಾಂತರಾಜ ಸಲ್ಲಿಸಿದ್ದ ಪದವಿ ದಾಖಲೆಗಳು ನಕಲಿ ಎಂಬುದಾಗಿ ಗೊತ್ತಾಗಿತ್ತು. ಈ ಸಂಬಂಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಆರ್.ಕೆ.ರಮೇಶ್ ಬಾಬು ಎಂಬುವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು, ಆರೋಪಿಗಳ ವಿರುದ್ಧ ಐಪಿಸಿ 420 (ವಂಚನೆ), 471 (ಸುಳ್ಳು ದಾಖಲೆಗಳನ್ನು ಸಲ್ಲಿಸುವುದು), 465 (ಸುಳ್ಳು ಸ್ಪಷ್ಟನೆ) ಮತ್ತು 468 ( ವಂಚನೆ ಮಾಡಲು ಸುಳ್ಳು ಹೇಳುವುದು) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ಸಿಕ್ಕಿಂಗೆ ತೆರಳಿದ್ದ ಶಿಕ್ಷಣ ಇಲಾಖೆ ಸಮಿತಿ:ಅರ್ಜಿದಾರರು ನೇಮಕಾತಿ ಪ್ರಕ್ರಿಯೆಯಲ್ಲಿ ಸಹಾಯಕ ಉಪನ್ಯಾಸಕ ಹುದ್ದೆಗಳಿಗೆ ಆಯ್ಕೆಯಾಗಿದ್ದರು. ಇದಕ್ಕಾಗಿ ಸಿಕ್ಕಿಂ ರಾಜ್ಯಕ್ಕೆ ಸೇರಿದ್ದ ವಿವಿಯೊಂದರ ಅಂಕ ಪಟ್ಟಿಗಳನ್ನು ಸಲ್ಲಿಸಿದ್ದ ಪರಿಣಾಮ ಅವುಗಳ ಪರಿಶೀಲನೆಗೆ ರಾಜ್ಯ ಸರ್ಕಾರ ರಚನೆ ಮಾಡಿದ್ದ ಡಾ.ಬಿ.ಜಿ. ಭಾಸ್ಕರ್ ಅವರ ನೇತೃತ್ವದಲ್ಲಿ ಸಮಿತಿ ಸಿಕ್ಕಿಂಗೆ ತೆರಳಿ ಪರಿಶೀಲನೆ ನಡೆಸಿತ್ತು. ಆದರೆ, ಅಂಕ ಪಟ್ಟಿಗಳು ನಕಲಿ ಎಂದು ಗೊತ್ತಾಗಿತ್ತು. ಆ ಬಳಿಕ ಅರ್ಜಿದಾರರ ವಿರುದ್ಧ ದೂರು ದಾಖಲಿಸಲಾಗಿತ್ತು.