ಕರ್ನಾಟಕ

karnataka

ETV Bharat / state

ಪಿಎಸ್ಐ ಹಗರಣದ ಆರೋಪಿ ಹರೀಶ್​ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್ - ಪಿಎಸ್​ಐ ಹಗರಣ

ಪಿಎಸ್​ಐ ಹಗರಣದ 34ನೇ ಆರೋಪಿ ಕೆ.ಹರೀಶ್ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

psi-exam-scam
ಜಾಮೀನು ನಿರಾಕರಿಸಿದ ಹೈಕೋರ್ಟ್

By

Published : Jan 18, 2023, 10:56 PM IST

ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿಯಲ್ಲಿ ಅಕ್ರಮವೆಸಗಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬ್ಯಾಡರಹಳ್ಳಿಯ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಕೆ.ಹರೀಶ್‌ ಎಂಬುವರಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ನ್ಯಾಯಾಂಗ ಬಂಧನದಲ್ಲಿರುವ ಪ್ರಕರಣದ 34ನೇ ಆರೋಪಿ ಕೆ.ಹರೀಶ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಪೀಠ, ಆರೋಪಿಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿ, ಅರ್ಜಿ ವಜಾಗೊಳಿಸಿದೆ.

ತನಿಖಾಧಿಕಾರಿಗಳ ವಾದ:ಪಿಎಸ್​ಐ ಹಗರಣಪ್ರಕರಣ ಸಂಬಂಧ ಸಿಐಡಿ ಪರವಾದ ಮಂಡಿಸಿದ್ದ ವಿಶೇಷ ಅಭಿಯೋಜಕ ಪಿ.ಪ್ರಸನ್ನ ಕುಮಾರ್, ಈ ಪ್ರಕರಣವು ಮಧ್ಯಪ್ರದೇಶದ ವ್ಯಾಪಂ ಮಾದರಿಯ ಹಗರಣವಾಗಿದೆ. ಪ್ರಕರಣದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಸರ್ಕಾರಿ ಅಧಿಕಾರಿಗಳು, ಹಿರಿಯ ಐಪಿಎಸ್ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಸ್ಟ್ರಾಂಗ್ ರೂಂನಲ್ಲಿದ್ದ ಸೇಫ್ಟಿ ಲಾಕರ್‌ಗಳನ್ನೇ ತೆರೆದು, ಉತ್ತರ ಪತ್ರಿಕೆಗಳನ್ನು ತಿದ್ದುವ ಮಟ್ಟಕ್ಕೆ ಹೋಗಿದ್ದಾರೆ. ಇಂಥ ಸಂದರ್ಭದಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕರೆ ತನಿಖೆಯಲ್ಲೂ ಹಸ್ತಕ್ಷೇಪ ಮಾಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಇಂಥ ಪ್ರಕರಣಗಳಲ್ಲಿ ನ್ಯಾಯಾಲಯಗಳು ಕಠಿಣ ನಿಲುವು ತಾಳಬೇಕು: ಅನರ್ಹ ಅಭ್ಯರ್ಥಿಗಳು ಅಕ್ರಮ ನಡೆಸಿ ಮುಖ್ಯವಾಹಿನಿಗೆ ಬಂದರೆ, ಅದು ಸಮಾಜಕ್ಕೆ ಮಾರಕವಾಗಲಿದೆ. ಆದ್ದರಿಂದ, ಇಂಥ ಪ್ರಕರಣಗಳಲ್ಲಿ ನ್ಯಾಯಾಲಯಗಳು ಕಠಿಣ ನಿಲುವು ತಾಳಬೇಕಾಗುತ್ತದೆ ಎಂದು ವ್ಯಾಪಂ ಹಗರಣದಲ್ಲಿ ಸುಪ್ರೀಂಕೋರ್ಟ್ ಹೇಳಿದೆ. ಈ ಹಗರಣದಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ, ಇನ್‌ಸ್ಪೆಕ್ಟರ್‌ಗಳು ಸೇರಿ ಹಲವು ಪ್ರಭಾವಿಗಳು ಶಾಮೀಲಾಗಿದ್ದಾರೆ. ಪೊಲೀಸ್ ಅಧಿಕಾರಿಯಾಗಿರುವ ಅರ್ಜಿದಾರರೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಪ್ರಕರಣದ ತನಿಖೆ ಇನ್ನೂ ಬಾಕಿ ಇದ್ದು, ಈ ಹಂತದಲ್ಲಿ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ. ಹೀಗಾಗಿ ಆರೋಪಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.

ಇದನ್ನೂ ಓದಿ:ಪಿಎಸ್ಐ ಹಗರಣ: ಅಮೃತ್ ಪಾಲ್ ವಿರುದ್ಧ 1406 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ ಸಿಐಡಿ

ಪ್ರಕರಣದ ಹಿನ್ನೆಲೆ ಏನು?:ರಾಜ್ಯದಲ್ಲಿ ಇತ್ತೀಚೆಗೆ ನಡೆದಿದ್ದ ಪಿಎಸ್ಐ ನೇಮಕಾತಿ ಹಗರಣದಲ್ಲಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿದ್ದ ಹರೀಶ್ ಪ್ರಕರಣದ 14ನೇ ಆರೋಪಿ ಆರ್.ಮಧು ಹಾಗೂ 16ನೇ ಆರೋಪಿ ದಿಲೀಪ್ ಕುಮಾರ್ (ಅಭ್ಯರ್ಥಿಗಳು) ಎಂಬುವರಿಗೆ ಪರೀಕ್ಷೆಯಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಅದಕ್ಕಾಗಿ 33ನೇ ಆರೋಪಿಯಾದ ಮೀಸಲು ಪೊಲೀಸ್ ಇನ್‌ಸ್ಪೆಕ್ಟರ್ ಮಧು ಜತೆ ಒಳಸಂಚು ರೂಪಿಸಿದ್ದ ಹರೀಶ್, ಇಬ್ಬರು ಅಭ್ಯರ್ಥಿಗಳಿಂದಲೂ ತಲಾ 30 ಲಕ್ಷ ರೂ. ಗಳಂತೆ ಒಟ್ಟು 60 ಲಕ್ಷ ರೂ. ಗಳನ್ನು ಸ್ವೀಕರಿಸಿದ್ದರು. ಬಳಿಕ 33ನೇ ಆರೋಪಿಯ ಮೂಲಕ 29ನೇ ಆರೋಪಿಯಾದ ನೇಮಕಾತಿ ವಿಭಾಗದ ಪ್ರಥಮ ದರ್ಜೆ ಸಹಾಯಕ ಡಿ.ಹರ್ಷನಿಗೆ ಹಣ ಹಾಗೂ ಕಾರ್ಬನ್ ಒಎಂಆರ್ ಶೀಟ್‌ಗಳನ್ನು ತಲುಪಿಸಿದ್ದರು. ಎಫ್‌ಎಸ್‌ಎಲ್ ವರದಿಯಲ್ಲೂ 14 ಹಾಗೂ 16ನೇ ಆರೋಪಿಗಳ ಒಎಂಆರ್ ಶೀಟ್ ತಿದ್ದಿರುವುದು ಸಾಬೀತಾಗಿದೆ ಎಂದು ಸಿಐಡಿಯ ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಿತ್ತು.

ಇನ್ನು ಕಳೆದ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಬಿಜೆಪಿ ಮುಖಂಡ ರಾಜೇಶ್​ಗೆ ಐದೂವರೆ ತಿಂಗಳ ನಂತರ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಪರೀಕ್ಷೆ ಅಕ್ರಮದ ಕೇಂದ್ರ ಬಿಂದುವಾದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಹಾಗೂ ಅಕ್ರಮದ ಕಿಂಗ್​ಪಿನ್​ಗಳಲ್ಲಿ ಒಬ್ಬರಾದ ದಿವ್ಯಾ ಹಾಗರಗಿ ಅವರ ಪತಿ ರಾಜೇಶ್​ ಹಾಗರಗಿಗೆ ಹಲವು ಷರತ್ತು ವಿಧಿಸಿ ನ್ಯಾಯಾಲಯ ಜಾಮೀನು ನೀಡಿತ್ತು.

ಇದನ್ನೂ ಓದಿ:ಪಿಎಸ್ಐ ಪರೀಕ್ಷಾ ಅಕ್ರಮ: ಮತ್ತೋರ್ವ ರ‍್ಯಾಂಕ್ ಅಭ್ಯರ್ಥಿ ಬಂಧನ

ABOUT THE AUTHOR

...view details