ಕರ್ನಾಟಕ

karnataka

ಐಎಸ್ ಉಗ್ರರ ಗುಂಪು ಸೇರಿ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿ: ಆರೋಪಿಗೆ ಜಾಮೀನು ನಿರಾಕರಣೆ

By

Published : Jun 15, 2023, 10:58 PM IST

ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ನಗರದ ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್​ ನಿರಾಕರಿಸಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು :ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರರ ಗುಂಪಿನ ಸದಸ್ಯನಾಗಿ 2015ರಿಂದಲೂ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ನಗರದ ಆರೋಪಿಯೊಬ್ಬರಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ನಗರದ ಸುದ್ದುಗುಂಟೆ ಪಾಳ್ಯದ ನಿವಾಸಿ ಜಬೀವುಲ್ಲಾ ಎಂಬವರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್‌. ಮುದಗಲ್‌ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ ಜಾಮೀನು ನಿರಾಕರಿಸಿ ಅರ್ಜಿ ವಜಾಗೊಳಿಸಿದೆ.

ವಿಚಾರಣೆ ವೇಳೆ ಎನ್‌ಐಎ ಪರ ವಾದ ಮಂಡಿಸಿದ್ದ ಪಿ. ಪ್ರಸನ್ನ ಕುಮಾರ್, ಅರ್ಜಿದಾರ ಜಬಿವುಲ್ಲಾ ಬೆಂಗಳೂರಿನ ಸುದ್ದುಗುಂಟೆ ಪಾಳ್ಯದಲ್ಲಿನ ತನ್ನ ಮನೆಯಲ್ಲಿ ಕೂತು ತಡ ರಾತ್ರಿಗಳಲ್ಲಿ ಅಲ್‌ ಹಿಂದ್‌ ಗುಂಪಿನ ಸದಸ್ಯರಿಗೆ ಜಿಹಾದಿ ಚಟುವಟಿಕೆ ನಡೆಸುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಬಿಲ್ಲು ಬಾಣಗಳ ಬಳಕೆ ಕಲಿತಿದ್ದ ಆರೋಪಿ: ಕೆಲವು ಸಂದರ್ಭಗಳಲ್ಲಿ ಸಮರ ಕಲೆಯ ತರಗತಿಗಳನ್ನು ಆರೋಪಿ ಹಮ್ಮಿಕೊಳ್ಳುತ್ತಿದ್ದ. ಪಿಸ್ತೂಲ್‌, ಬಿಲ್ಲು ಬಾಣಗಳ ಬಳಕೆಯ ವಿದ್ಯೆಯನ್ನೂ ಕಲಿತಿದ್ದ ಎಂದು ವಿವರಿಸಿದ್ದರು. ಪ್ರಕರಣದ ಮೊದಲ ಆರೋಪಿ ಮೊಹಮದ್ ಪಾಶಾಗೆ ಬೆಂಗಳೂರಿನಿಂದ ಹಣ ಸಂಗ್ರಹಿಸಿ ರವಾನಿಸುತ್ತಿದ್ದ. ಈತನ ವಿರುದ್ಧದ ಆರೋಪಗಳು ಗಂಭೀರವಾಗಿವೆ. ಇದೇ ಕಾರಣದಿಂದ ವಿಶೇಷ ನ್ಯಾಯಾಲಯ ಜಾಮೀನು ತಿರಸ್ಕರಿಸಿದೆ. ಆದ್ದರಿಂದ ಜಾಮೀನು ಮಂಜೂರು ಮಾಡಬಾರದು ಎಂದು ಮನವಿ ಮಾಡಿದ್ದರು.

ಅಲ್ಲದೆ, ಅರ್ಜಿದಾರ ಆರೋಪಿ ಬೆಂಗಳೂರು ನಗರದಲ್ಲಿ ಐಎಸ್‌ನ ಅನೈತಿಕ ಚಟುವಟಿಕೆಗಳನ್ನು ವಿಸ್ತರಿಸುವ ಗುರಿ ಹೊಂದಿದ್ದ. ಇಲ್ಲಿನ ಹಿಂದೂ ನಾಯಕರನ್ನು ಹತ್ಯೆಗೈಯ್ಯುವ, ಅಶಾಂತಿ ಉಂಟು ಮಾಡಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಸಂಚುಗಳನ್ನು ರೂಪಿಸುವ ಪ್ರಯತ್ನ ನಡೆಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ : ನಗರದ ಎನ್‌ಐಎ ವಿಶೇಷ ನ್ಯಾಯಾಲಯ ಆರೋಪಿಯ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಆರೋಪಿಯ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ-1967ರ (ಯುಎಪಿಎ) ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದಂಪತಿ ಒಂದೇ ಮನೆಯಲ್ಲಿದ್ದ ಕಾರಣಕ್ಕೆ ವಿಚ್ಛೇದನ ನಿರಾಕರಿಸುವಂತಿಲ್ಲ: ದಂಪತಿ ಒಂದೇ ಮನೆಯಲ್ಲಿ ನೆಲೆಸಿದ್ದಾರೆ ಎಂಬ ಕಾರಣವನ್ನು ನೀಡಿ ವಿಚ್ಛೇದನ ನಿರಾಕರಿಸುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪರಸ್ಪರ ಒಪ್ಪಿಗೆಯ ವಿಚ್ಛೇದನ ನೀಡುವಂತೆ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹಾಗೂ ವಿಚ್ಛೇದನ ಕೋರಿ ದಂಪತಿ ಅರ್ಜಿಯನ್ನು ಸಲ್ಲಿಸಿದ್ದರು. ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ಅರ್ಜಿ ಆಲಿಸಿ ಈ ಆದೇಶ ನೀಡಿದೆ.

ದಂಪತಿ ಪರಸ್ಪರ ಸಮ್ಮತಿಯ ವಿಚ್ಛೇದನಕ್ಕೆ ಒಪ್ಪಿದ್ದರೆ, ಅಂತಹ ಸಂದರ್ಭದಲ್ಲಿ ಅವರು ಒಂದೇ ಮನೆಯಲ್ಲಿ ನೆಲೆಸಿದ್ದಾರೆಂದು ಅವರ ವಿಚ್ಛೇದನಕ್ಕೆ ಅನುಮತಿ ನೀಡುವುದನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ. ಜತೆಗೆ ಕೌಟುಂಬಿಕ ನ್ಯಾಯಾಲಯ 2022ರ ಅ. 15ರಂದು ಹೊರಡಿಸಿದ್ದ ಆದೇಶವನ್ನು ನ್ಯಾಯಪೀಠ ರದ್ದುಗೊಳಿಸಿದೆ. ಅಲ್ಲದೇ, ಹೊಸದಾಗಿ ವಿಚಾರಣೆ ನಡೆಸಿ ರಾಜೀ ಅರ್ಜಿಯ ನಿಯಮಗಳಿಗೆ ಅನುಗುಣವಾಗಿ ಮಧ್ಯಸ್ಥಿಕೆದಾರರ ಸಮಕ್ಷಮದಲ್ಲಿ ಆದಷ್ಟು ಶೀಘ್ರ ಹೊಸದಾಗಿ ಆದೇಶ ನೀಡುವಂತೆಯೂ ಸೂಚಿಸಿದೆ.

ಇದನ್ನೂ ಓದಿ:Divorce : ದಂಪತಿ ಒಂದೇ ಮನೆಯಲ್ಲಿದ್ದ ಕಾರಣಕ್ಕೆ ವಿಚ್ಛೇದನ ನಿರಾಕರಿಸುವಂತಿಲ್ಲ : ಹೈಕೋರ್ಟ್

ABOUT THE AUTHOR

...view details