ಬೆಂಗಳೂರು :ನ್ಯಾಯಾಲಯದ ಮಧ್ಯಂತರ ಆದೇಶ ಉಲ್ಲಂಘಿಸಿ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಿದ ಆರೋಪದಲ್ಲಿ ಚಲನಚಿತ್ರ ನಿರ್ಮಾಪಕ ಶರತ್ ಚಂಪತಿ, ಕಲ್ಯಾಣ ವರ್ಮ ಮತ್ತು ಜೆ.ಎಸ್. ಅಮೋಘವರ್ಷ ಹಾಗೂ ಡಿಸ್ಕವರಿ ಇಂಡಿಯಾ, ಬಿಬಿಸಿ-ಯು.ಕೆ ಮತ್ತು ನೆಟ್‌ಫ್ಲಿಕ್ಸ್ ವಿರುದ್ಧ ಆರೋಪ ನಿಗದಿಪಡಿಸಲು ಹೈಕೋರ್ಟ್ ನಿರ್ಧರಿಸಿದೆ.
ಅಲ್ಲದೆ, ಯುಕೆ ಮೂಲದ ಚಲನಚಿತ್ರ ನಿರ್ಮಾಪಕ ಸಂಸ್ಥೆಯಾದ ಐಕಾನ್ ಫಿಲ್ಮ್ ಲಿಮಿಟೆಡ್, ವಿತರಕರಾದ ಐಟಿವಿ ಸ್ಟೂಡಿಯೋ ಗ್ಲೋಬಲ್ ಡಿಸ್ಟ್ರೀಬೂಟರ್ ಲಿಮಿಟೆಡ್ ವಿರುದ್ಧವೂ ಆರೋಪ ನಿಗದಿಯಾಗಲಿದೆ. ರವೀಂದ್ರ ಎನ್. ರಾಡ್ಕರ್ ಮತ್ತು ಆರ್.ಕೆ. ಉಲ್ಲಾಶ್ ಕುಮಾರ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ನೀಡಿದ್ದ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ:ವೈಲ್ಡ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಉದ್ದೇಶಕ್ಕಾಗಿ ನಿರ್ಮಿಸಿಲ್ಲ. ವನ್ಯಜೀವಿ ಸಂಪತ್ತನ್ನು ಉತ್ತೇಜಿಸುವುದು, ಈ ಕುರಿತು ಅರಿವು ಮೂಡಿಸುವುದಕ್ಕೆ ನಿರ್ಮಿಸಲಾಗಿತ್ತು. ಈ ಸಾಕ್ಷ್ಯಚಿತ್ರ ಪ್ರಸಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯ ರಾಜ್ಯ ಅರಣ್ಯ ಇಲಾಖೆಯ ಒಪ್ಪಂದವನ್ನು ಉಲ್ಲಂಘಿಸಿ ಸಾಕ್ಷ್ಯಚಿತ್ರ ಪ್ರಸಾರ ಮಾಡುವುದು, ಹಂಚಿಕೆ ಮಾಡದಂತೆ ಚಿತ್ರದ ನಿರ್ಮಾಪಕರು, ಬೆಂಗಳೂರು ಮೂಲದ ಮಡ್ಸ್ಕಿಪ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್‌ಗೆ 2021ರ ಜೂನ್ 29ರಂದು ಹೈಕೋರ್ಟ್ ನಿರ್ಬಂಧ ವಿಧಿಸಿ ಮಧ್ಯಂತರ ಆದೇಶ ನೀಡಿತ್ತು.