ಬೆಂಗಳೂರು:ಮಡಿಕೇರಿಯಲ್ಲಿ ಶಿಥಿಲಗೊಂಡ ಅರಮನೆಯನ್ನ ದುರಸ್ತಿ ಪಡಿಸುವ ಸಂಬಂಧ ನ್ಯಾಯಾಲಯದ ಆದೇಶ ಪಾಲನೆ ಮಾಡದ ಅಧಿಕಾರಿಗಳ ವರ್ತನೆಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ತೀರ್ಮಾನ ಮಾಡಿದೆ.
ಅರಮನೆಯ ರಕ್ಷಣೆ ಹಾಗೂ ದುರಸ್ತಿ ಕೋರಿ ಅರ್ಜಿದಾರ ವಿರುಪಾಕ್ಷಯ್ಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ಹೈಕೋರ್ಟ್ ಈ ಹಿಂದೆ ಸೂಚನೆ ನೀಡಿತ್ತು. ಅರಮನೆ ಸ್ಥಿತಿಗತಿ ಪರಿಶೀಲಿಸಿ ಅಧಿಕಾರಿಗಳು ನೀಡಿದ ವರದಿ ಆಧರಿಸಿ ತುರ್ತು ರಿಪೇರಿ ಕೈಗೊಳ್ಳಲು ನ್ಯಾಯಾಲಯ ಆದೆಶ ನೀಡಿತ್ತು. ಆದರೆ ಅಧಿಕಾರಿಗಳು ದುರಸ್ತಿ ಬಗ್ಗೆ ಗಮನಹರಿಸದೇ ನಿರ್ಲಕ್ಷ್ಯ ವಹಿಸಿರುವುದನ್ನ ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದರು.
ಅಧಿಕಾರಿಗಳ ತಾತ್ಸಾರ ಧೋರಣೆ ಬಗ್ಗೆ ನ್ಯಾಯಾಲಯ ಅತೃಪ್ತಿ ವ್ಯಕ್ತಪಡಿಸಿ, ಇದೇ ತಿಂಗಳ 31ರೊಳಗೆ ನಿಯಮ ಉಲ್ಲಂಘನೆ ಮಾಡಿದ ಅಧಿಕಾರಿಗಳ ಹೆಸರನ್ನ ಹೈಕೋರ್ಟ್ಗೆ ನೀಡಲು ಸೂಚಿಸಿ ವಿಚಾರಣೆ ಮುಂದೂಡಿದೆ.