ಕರ್ನಾಟಕ

karnataka

ETV Bharat / state

ಕಾನೂನಾತ್ಮಕ ಅಂಶಗಳ ಅಡಿ ಪರಿಹಾರ ಕೇಳಿ: ವಕೀಲರಿಗೆ ಹೈಕೋರ್ಟ್ ಸಲಹೆ - ಕಾನೂನಾತ್ಮಕ ಅಂಶಗಳ ಆಧಾರದಲ್ಲಿ ಕೇಳಬೇಕು

ಕಾನೂನಾತ್ಮಕ ಅಂಶಗಳನ್ನು ತೋರಿಸದೇ ಪರಿಹಾರ ಕೇಳಿದರೆ ಹೇಗೆ ಎಂದು ಪ್ರಕರಣವೊಂದರ ವಿಚಾರಣೆ ವೇಳೆ ವಕೀಲರನ್ನು ಪ್ರಶ್ನಿಸಿರುವ ಹೈಕೋರ್ಟ್, ಪರಿಹಾರ ಬೇಕಿದ್ದಲ್ಲಿ ಕಾನೂನಾತ್ಮಕ ಅಂಶಗಳನ್ನು ಸ್ಪಷ್ಟಪಡಿಸಬೇಕು ಎಂದು ಸಲಹೆ ನೀಡಿದೆ.

High Court counsel Ask for compensation under legal factors for lawyers
ಕಾನೂನಾತ್ಮಕ ಅಂಶಗಳ ಅಡಿಯಲ್ಲಿ ಪರಿಹಾರ ಕೇಳಿ : ವಕೀಲರಿಗೆ ಹೈಕೋರ್ಟ್ ಸಲಹೆ

By

Published : Sep 25, 2020, 10:38 PM IST

ಬೆಂಗಳೂರು: ನ್ಯಾಯಾಲಯದಲ್ಲಿ ಪರಿಹಾರ ಕೇಳುವಾಗ ನಿರ್ದಿಷ್ಟ ಕಾನೂನಾತ್ಮಕ ಅಂಶಗಳ ಆಧಾರದಲ್ಲಿ ಕೇಳಬೇಕು. ಕಾನೂನಾತ್ಮಕ ಅಂಶಗಳನ್ನು ತೋರಿಸದೇ ಪರಿಹಾರ ಕೇಳಿದರೆ ಹೇಗೆ ಎಂದು ಪ್ರಕರಣವೊಂದರ ವಿಚಾರಣೆ ವೇಳೆ ವಕೀಲರನ್ನು ಪ್ರಶ್ನಿಸಿರುವ ಹೈಕೋರ್ಟ್, ಪರಿಹಾರ ಬೇಕಿದ್ದಲ್ಲಿ ಕಾನೂನಾತ್ಮಕ ಅಂಶಗಳನ್ನು ಸ್ಪಷ್ಟಪಡಿಸಬೇಕು ಎಂದು ಸಲಹೆ ನೀಡಿದೆ.
ರಾಜ್ಯ ಸರ್ಕಾರ ತನ್ನ ಭೂ ಸುಧಾರಣಾ ಕಾಯ್ದೆಯ ನಿಯಮಗಳಿಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ಅರ್ಜಿದಾರ ವಕೀಲರಿಗೆ ಈ ಸಲಹೆ ನೀಡಿದೆ.

ಸುಗ್ರೀವಾಜ್ಞೆ ಪ್ರಶ್ನಿಸಿ ರಾಮನಗರ ಜಿಲ್ಲೆಯ ಕನಕಪುರದ ದಿನೇಶ್ ಕಲ್ಲೇನಹಳ್ಳಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠದಲ್ಲಿ ವಿಚಾರಣೆಗೆ ನಿಗದಿಯಾಗಿತ್ತು.

ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರಾದ ಚಂದ್ರಕಾಂತ್ ಎಂ. ಅಂಗಡಿ ವಾದ ಮಂಡಿಸಿ, ರೈತರನ್ನು ದೇಶದ ಬೆನ್ನೆಲುಬು ಎಂದು ಕರೆಯುತ್ತಾರೆ. ಆದರೆ, ರಾಜ್ಯ ಸರ್ಕಾರ ದೇಶದ ಬೆನ್ನೆಲುಬನ್ನೇ ಮುರಿಯಲು ಮುಂದಾಗಿದೆ. ಭೂ ಸುಧಾರಣಾ ಕಾಯ್ದೆಗೆ ಅಧಿವೇಶನದಲ್ಲಿ ಚರ್ಚೆ ನಡೆಸಿ ತಿದ್ದುಪಡಿ ಮಾಡುವ ಬದಲು ಹಿಂಬಾಗಿಲ ಮೂಲಕ ತಮ್ಮ ಕಾರ್ಯ ಸಾಧಿಸಲು ಮುಂದಾಗಿದೆ. ಸರ್ಕಾರದ ಈ ಕ್ರಮದಿಂದ ಸಣ್ಣ ಮತ್ತು ಮಧ್ಯಮ ರೈತರು ನಾಶವಾಗಲಿದ್ದಾರೆ ಎಂದು ಭಾವುಕವಾಗಿ ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಈ ರೀತಿ ವಾದಿಸಿದರೆ ನಾವು ಪರಿಹಾರ ನೀಡುವುದಾದರೂ ಹೇಗೆ. ನ್ಯಾಯಾಲಯದಲ್ಲಿ ಪರಿಹಾರ ಕೇಳುವಾಗ ಕಾನೂನಾತ್ಮಕ ಅಂಶಗಳನ್ನು ಸ್ಪಷ್ಟಪಡಿಸಬೇಕು. ಸಾದಾಸೀದಾ ಕೇಳಿದರೆ ಪರಿಹಾರ ಕಷ್ಟ ಎಂದಿತು. ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲರು, ರೈತರ ಬಗ್ಗೆ ನ್ಯಾಯಾಲಯ ಕನಿಕರ ತೋರಿಸಬೇಕು ಮತ್ತು ರಕ್ಷಿಸಬೇಕು ಎಂದರು.

ಅರ್ಜಿದಾರರ ಸದುದ್ದೇಶ ಗಮನಿಸಿದ ಪೀಠ, ನೀವು ಅರ್ಜಿಯನ್ನು ತಿದ್ದುಪಡಿ ಮಾಡಿ ಸಲ್ಲಿಸಿ. ಅದರಲ್ಲಿ ಕಾನೂನಾತ್ಮಕ ಅಂಶಗಳನ್ನು ನಿಖರವಾಗಿ ನಮೂದಿಸಿ. ನಂತರ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಸೂಚಿಸಿತು. ಅಲ್ಲದೇ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಅಕ್ಟೋಬರ್ 13 ಕ್ಕೆ ಮುಂದೂಡಿತು.

ಅರ್ಜಿದಾರರ ಕೋರಿಕೆ:ಅರ್ಜಿಯಲ್ಲಿ, ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆಯ ಸೆಕ್ಷನ್ 79ಎ, 79ಬಿ ರದ್ದು ಮಾಡಿ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿರುವುದು ನಿಯಮ ಬಾಹಿರ. ಕೃಷಿ ಭೂಮಿ ರೈತರಲ್ಲಿಯೇ ಉಳಿಯಬೇಕಾದರೆ, ಬಂಡವಾಳಗಾರರು, ಉದ್ಯಮಿಗಳು, ವ್ಯಾಪಾರಸ್ಥರು ಹಾಗೂ ರೈತರಲ್ಲದವರು ಭೂಮಿ ಖರೀದಿ ಮಾಡಬಾರದು. ಅದಕ್ಕಾಗಿಯೇ ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 2 ಲಕ್ಷ ರೂ.ಗಳಿಗಿಂತ ಹೆಚ್ಚು ಆದಾಯ ಉಳ್ಳವರು ಕೃಷಿ ಭೂಮಿ ಖರೀದಿಸಬಾರದು ಎಂದು ನಿಯಮ ಜಾರಿಗೊಳಿಸಿದ್ದರು. ಸಿದ್ಧರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 2 ಲಕ್ಷ ಆದಾಯ ಮಿತಿಯನ್ನು 25 ಲಕ್ಷಕ್ಕೆ ಏರಿಕೆ ಮಾಡಿದ್ದರು. ಈಗ ರಾಜ್ಯ ಸರ್ಕಾರ ಉದ್ಯಮಿಗಳಿಗೆ, ಹಣವಂತರಿಗೆ ಭೂಮಿ ಖರೀದಿ ಮಾಡಲು ಅನುಕೂಲವಾಗುವಂತೆ ನಿಯಮಗಳಿಗೆ ತಿದ್ದುಪಡಿ ಮಾಡಿರುವುದರಿಂದ ರೈತ ಸಮುದಾಯಕ್ಕೆ ಅನ್ಯಾಯವಾಗಿದೆ. ಹೀಗಾಗಿ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ABOUT THE AUTHOR

...view details