ಕರ್ನಾಟಕ

karnataka

ETV Bharat / state

ಆತ್ಮಹತ್ಯೆಗೆ ಶರಣಾದ ರೈತರಿಗೆ ₹5 ಲಕ್ಷ ಪರಿಹಾರ.. ಲೇವಾದೇವಿಗಾರರ ಪರವಾನಿಗೆ ಗೊಂದಲ : ಪ್ರಶ್ನಿಸಲು 'ಹೈ'ಸಮ್ಮತಿ - ಪರಿಹಾರ ಪರವಾನಿಗೆ ಗೊಂದಲ ಪ್ರಶ್ನಿಸಲು ಹೈಕೋರ್ಟ್ ಸಮ್ಮತಿ

ಸರ್ಕಾರ ಕೈಗೊಂಡಿರುವ ತೀರ್ಮಾನವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಅರ್ಜಿದಾರರು ಸ್ವತಂತ್ರರಿದ್ದಾರೆ ಎಂದು ತಿಳಿಸಿತು. ಅಲ್ಲದೇ, ಸರ್ಕಾರ ಇದೀಗ ಹೊರಡಿಸಿರುವ ಆದೇಶದಂತೆ ಅರ್ಹ ರೈತ ಕುಟುಂಬಗಳನ್ನು ಗುರುತಿಸಿ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಅನುಪಾಲನಾ ವರದಿಯನ್ನು ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಆಗಸ್ಟ್ 13ಕ್ಕೆ ಮುಂದೂಡಿತು..

ಹೈಕೋರ್ಟ್ ಸಮ್ಮತಿ
ಹೈಕೋರ್ಟ್ ಸಮ್ಮತಿ

By

Published : Jul 13, 2021, 7:45 PM IST

ಬೆಂಗಳೂರು : ಬ್ಯಾಂಕುಗಳಷ್ಟೇ ಅಲ್ಲದೆ ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದು ತೀರಿಸಲಾಗದೆ ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಕ್ಕೂ 5 ಲಕ್ಷ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಆದರೆ, ಪರವಾನಿಗೆ ಪಡೆದ ಲೇವಾದೇವಿಗಾರರಿಂದ ಸಾಲ ಪಡೆದು ತೀರಿಸಲಾಗದೆ ಸಾವಿಗೆ ಕೊರಳೊಡ್ಡಿದ ರೈತರಿಗಷ್ಟೇ ಈ ಸೌಲಭ್ಯ ಎಂದು ಸರ್ಕಾರ ಹೇಳಿದೆ.

ಸರ್ಕಾರದ ಈ ಆದೇಶ ಅಸಮಾನತೆಯಿಂದ ಕೂಡಿದೆ ಎಂದು ಆಕ್ಷೇಪಿಸಿರುವ ಅರ್ಜಿದಾರರ ಪರ ವಕೀಲರು, ರೈತರು ಖಾಸಗಿ ಲೇವಾದೇವಿಗಾರರಿಂದ ಸಾಲ ಪಡೆಯುವ ವೇಳೆ ಅವರು ಲೈಸೆನ್ಸ್ ಪಡೆದಿದ್ದಾರೋ ಇಲ್ಲವೋ ಎಂಬುದನ್ನು ತಿಳಿದಿರುವುದಿಲ್ಲ.

ಹೀಗಾಗಿ, ಪರವಾನಿಗೆ ಪಡೆದ ಲೇವಾದೇವಿದಾರರಿಂದ ಸಾಲ ಪಡೆದು ತೀರಿಸಲಾಗದೆ ಮೃತಪಟ್ಟ ರೈತರಿಗೆ ಪರಿಹಾರ ನೀಡಿ, ಉಳಿದವರಿಗೆ ಪರಿಹಾರ ನೀಡದೆ ಇರುವುದು ಸರಿಯಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಹೈಕೋರ್ಟ್, ಸರ್ಕಾರದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಅರ್ಜಿದಾರರು ಸ್ವತಂತ್ರರಿದ್ದಾರೆ ಎಂದು ಹೇಳಿದೆ.

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿ 2016ರಿಂದ ಬೆಳೆ ನಷ್ಟ ವಿಮೆ ಪರಿಹಾರ ನೀಡಿಲ್ಲ ಎಂದು ಆಕ್ಷೇಪಿಸಿ, ಯಾದಗಿರಿಯ ರೈತರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಪರವಾನಿಗೆ ಪಡೆದ ಖಾಸಗಿ ಲೇವಾದೇವಿಗಾರರಿಂದ ಪಡೆದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ ಪರಿಹಾರ ನೀಡಲು ನಿರ್ಧರಿಸಿದ್ದು, ಈ ಕುರಿತು ಜುಲೈ 8ರಂದು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರದ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ರೋಜಾರಿಯೋ, ಪರವಾನಿಗೆ ಹೊಂದಿರದ ಲೇವಾದೇವಿದಾರರಿಂದ ಪಡೆದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡುತ್ತಿಲ್ಲ.

ರೈತರು ಸಾಲ ಪಡೆಯುವ ವೇಳೆ ಯಾವ ಲೇವಾದೇವಿಗಾರ ಪರವಾನಿಗೆ ಹೊಂದಿದ್ದಾರೆ ಎಂಬುದನ್ನು ನೋಡುವುದಿಲ್ಲ. ಆ ವಿಚಾರ ರೈತರಿಗೆ ತಿಳಿಯುವುದೂ ಇಲ್ಲ. ಹೀಗಾಗಿ, ಸಾಲ ತೀರಿಸಲಾಗದೆ ಸಾವನ್ನಪ್ಪಿದ ರೈತರಿಗೆ ಸಮಾನ ಪರಿಹಾರ ನೀಡಬೇಕು ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸರ್ಕಾರ ಕೈಗೊಂಡಿರುವ ತೀರ್ಮಾನವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಅರ್ಜಿದಾರರು ಸ್ವತಂತ್ರರಿದ್ದಾರೆ ಎಂದು ತಿಳಿಸಿತು. ಅಲ್ಲದೇ, ಸರ್ಕಾರ ಇದೀಗ ಹೊರಡಿಸಿರುವ ಆದೇಶದಂತೆ ಅರ್ಹ ರೈತ ಕುಟುಂಬಗಳನ್ನು ಗುರುತಿಸಿ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಅನುಪಾಲನಾ ವರದಿಯನ್ನು ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಆಗಸ್ಟ್ 13ಕ್ಕೆ ಮುಂದೂಡಿತು.

ಪರಿಹಾರ ನೀಡಲು ತಾಕೀತು ಮಾಡಿದ್ದ ಹೈಕೋರ್ಟ್ : ಸರ್ಕಾರಿ ಬ್ಯಾಂಕುಗಳು ಮತ್ತು ಸಹಕಾರಿ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ಮರುಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ನೀಡುತ್ತದೆ.

ಆದರೆ, ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದವರಿಗೆ ಈ ಪರಿಹಾರ ನೀಡಲು ಅವಕಾಶವಿಲ್ಲ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿತ್ತು. ಸರ್ಕಾರದ ಈ ನಿರ್ಧಾರವನ್ನ ಒಪ್ಪದ ಪೀಠ, ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ.

ಹಾಗೆ ಮಾಡಿದಲ್ಲಿ ಅದು ಸಂವಿಧಾನದ ವಿಧಿ 14ರ ಸಮಾನತೆ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಆದ್ದರಿಂದ, ಖಾಸಗಿ ಲೇವಾದೇವಿಗಾರರಿಂದ ಪಡೆದ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೂ ಪರಿಹಾರ ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿತ್ತು.

For All Latest Updates

ABOUT THE AUTHOR

...view details