ಬೆಂಗಳೂರು : ವಾಹನಗಳ ನೋಂದಣಿ ಪ್ರಮಾಣ ಪತ್ರಗಳನ್ನು (ಆರ್ಸಿ) ಈ ಹಿಂದಿನಂತೆಯೇ ಸ್ಮಾರ್ಟ್ ಕಾರ್ಡ್ ಮೂಲಕವೇ ವಿತರಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದೆ.
ಸ್ಮಾರ್ಟ್ಕಾರ್ಡ್ ಆಧಾರಿತ ನೋಂದಣಿ ಪ್ರಮಾಣ ಪತ್ರಕ್ಕೆ (ಆರ್ಸಿ) ಬದಲಾಗಿ ಎಲೆಕ್ಟ್ರಾನಿಕ್ ಅಥವಾ ಅನ್ಲೈನ್ ಮೂಲಕ ಆರ್ಸಿ ವಿತರಿಸಲು ಕರ್ನಾಟಕ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿರುವ ಕ್ರಮ ಪ್ರಶ್ನಿಸಿ ರೂಸ್ಮೆರ್ಟಾ ಟೆಕ್ನಾಲಜೀಸ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರ ಸಂಸ್ಥೆ ರೂಸ್ಮೆರ್ಟಾ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ಕೇಂದ್ರ ಸರ್ಕಾರದ ಒನ್ ನೇಷನ್ ಒನ್ ಕಾರ್ಡ್ ಯೋಜನೆಯಂತೆ ರಾಜ್ಯ ಸರ್ಕಾರ ಸ್ಮಾರ್ಟ್ ಕಾರ್ಡ್ ವಿತರಿಸುವ ಸಂಬಂಧ ಸಂಸ್ಥೆಯೊಂದಿಗೆ 2009ರಲ್ಲಿ ಒಪ್ಪಂದ ಮಾಡಿಕೊಂಡಿದ್ದು, 2024ರವರೆಗೂ ಜಾರಿಯಲ್ಲಿರಲಿದೆ. ಈ ನಡುವೆ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ವಾಹನಗಳ ಉತ್ಪಾದಕರು, ಡೀಲರ್ಗಳಿಗೆ ನೋಂದಣಿ ಅವಕಾಶ ನೀಡುವ ಮೂಲಕ ಒಪ್ಪಂದ ಉಲ್ಲಂಘಿಸಿದೆ. ಇದು ಒಪ್ಪಂದದ ಉಲ್ಲಂಘನೆ ಎಂದು ಆರೋಪಿಸಿದರು.