ಬೆಂಗಳೂರು: ನ್ಯಾಯಾಲಯದ ಅನುಮತಿ ದುರ್ಬಳಕೆ ಮಾಡಿಕೊಂಡು ಕೋವಿಡ್ ಜಾಗೃತಿ ಜಾಹೀರಾತು ಅಳವಡಿಕೆಗೆ ಖಾಸಗಿ ಏಜೆನ್ಸಿ ಬಳಸಿಕೊಂಡಿದ್ದ ಆರೋಗ್ಯ ಇಲಾಖೆ ವಿರುದ್ಧ ತನಿಖೆ ನಡೆಸಲು ಹೊಸ ತನಿಖಾಧಿಕಾರಿ ನೇಮಕ ಮಾಡಿ, ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೊರೊನಾ ಜಾಗೃತಿ ಜಾಹೀರಾತು ಫಲಕ ಅಳವಡಿಸಲು ಅನುಮತಿ ನೀಡುವ ವೇಳೆ ಹೈಕೋರ್ಟ್ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿದ ಕುರಿತು ವಕೀಲ ಜಿ.ಆರ್. ಮೋಹನ್ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಓದಿ:ಸಾರಿಗೆ ಇಲಾಖೆ ನೌಕರರ ಬೇಡಿಕೆಗಳ ಪರಿಶೀಲನೆಗೆ ಸಮಿತಿ ರಚಿಸಿದ ಸರ್ಕಾರ
ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದಿಸಿ, ನ್ಯಾಯಾಲಯದ ನಿರ್ದೇಶನದಂತೆ ವಿಚಾರಣೆ ನಡೆಸಿರುವ ಸರ್ಕಾರದ ಹಿರಿಯ ಅಧಿಕಾರಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ನ್ಯಾಯಾಲಯ ಸ್ಪಷ್ಟವಾಗಿ ಹೇಳಿದ್ದರೂ ಸರ್ಕಾರ ಷರತ್ತುಗಳನ್ನು ಉಲ್ಲಂಘಿಸಿ ಜಾಹೀರಾತು ಅಳವಡಿಕೆಗೆ ಖಾಸಗಿ ಏಜೆನ್ಸಿ ಬಳಕೆ ಮಾಡಿಕೊಂಡಿದೆ. ಹಾಗಿದ್ದೂ, ಪ್ರಕರಣವನ್ನು ಮುಕ್ತಾಯಗೊಳಿಸಿದ್ದು ಹೇಗೆ? ಎಂದು ಪ್ರಶ್ನಿಸಿತು. ಅಲ್ಲದೇ, ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಲು ಹಿರಿಯ ದಕ್ಷ ಅಧಿಕಾರಿಯನ್ನು ನೇಮಿಸಬೇಕು. ಅವರಿಂದ ವಿಚಾರಣೆ ನಡೆಸಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಕೊರೊನಾ ಜಾಗೃತಿಗೆ ಜಾಹೀರಾತು ಅಳವಡಿಸಲು ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿತ್ತು. ಆದರೆ, ಆರೋಗ್ಯ ಇಲಾಖೆ ಕೊರೊನಾ ಹೆಸರಿನಲ್ಲಿ ಖಾಸಗಿ ಜಾಹೀರಾತು ಅಳವಡಿಸಲು ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಕೊರೋನಾ ಜಾಗೃತಿಯ ಹೋರ್ಡಿಂಗ್ಸ್ ಅಳವಡಿಸಲು ಸರ್ಕಾರಕ್ಕೆ ನೀಡಿದ್ದ ಅನುಮತಿಯನ್ನು ಹಿಂಪಡೆದಿತ್ತು. ಕೋರ್ಟ್ ಷರತ್ತು ಉಲ್ಲಂಘಿಸಿ ಖಾಸಗಿ ಜಾಹೀರಾತು ಅಳವಡಿಸಲು ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಹಿರಿಯ ಅಧಿಕಾರಿಯಿಂದ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿದ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು.