ಬೆಂಗಳೂರು: ವಶಕ್ಕೆ ತೆಗೆದುಕೊಂಡ ಲ್ಯಾಪ್ಟಾಪ್, ಮೊಬೈಲ್ ಸೇರಿದಂತೆ ಗ್ಯಾಜೆಟ್ಗಳಲ್ಲಿನ ಯಾವುದೇ ವ್ಯಕ್ತಿಯ ಖಾಸಗಿ ಅಥವಾ ಗೌಪ್ಯ ಮಾಹಿತಿ ಮೂರನೇ ವ್ಯಕ್ತಿಗೆ ಹಂಚಿಕೆಯಾದರೆ ಅಥವಾ ಸೋರಿಕೆಯಾದರೆ ಇದಕ್ಕೆ ತನಿಖಾಧಿಕಾರಿ(ಐಒ)ಗಳೇ ನೇರ ಹೊಣೆಯಾಗಿದ್ದು, ಈ ಸಂಬಂಧ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ತನಿಖಾಧಿಕಾರಿಗಳು ವಶಪಡಿಸಿಕೊಳ್ಳುವ ಕಂಪ್ಯೂಟರ್, ಸ್ಮಾರ್ಟ್ ಫೋನ್, ಲ್ಯಾಪ್ಟಾಪ್, ಸ್ಟೋರೇಜ್ ಡಿವೈಸ್ಗಳು ಸೇರಿದಂತೆ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳಲ್ಲಿನ ಮಾಹಿತಿಯನ್ನು ಸೋರಿಕೆಯಾಗದಂತೆ ರಕ್ಷಿಸಿಡಬೇಕು. ಇದು ಅಧಿಕಾರಿಗಳ ಕರ್ತವ್ಯವೂ ಹೌದು. ಈ ಗೌಪ್ಯ ಮಾಹಿತಿಯನ್ನು ವಿಚಾರಣೆ ವೇಳೆ ಬಹಿರಂಗಪಡಿಸಬೇಕಿದ್ದರೆ, ಅದನ್ನು ನ್ಯಾಯಾಲಯವೇ ನಿರ್ಧರಿಸಬೇಕು. ಇದಕ್ಕೂ ಮುನ್ನ ಮಾಹಿತಿಯನ್ನು ಸಾರ್ವಜನಿಕಗೊಳಿಸಬೇಕಿದ್ದರೆ ತನಿಖಾಧಿಕಾರಿಗಳು ಕಡ್ಡಾಯವಾಗಿ ನ್ಯಾಯಾಲಯದ ಅನುಮತಿ ಪಡೆದುಕೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ.