ಬೆಂಗಳೂರು: ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿರುವ ಹಿರಿಯ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರು ಮಾರ್ಗದರ್ಶಕರು, ಆಡಳಿತಗಾರ ಮತ್ತು ಶೈಕ್ಷಣಿಕ ತಜ್ಞರಾಗಿ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ತಿಳಿಸಿದ್ದಾರೆ.
ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿರುವ ರಾಜ್ಯ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿಗೆ ಬೆಂಗಳೂರು ವಕೀಲರ ಸಂಘ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಾತನಾಡಿದರು. ಪ್ರತಿಯೊಬ್ಬರನ್ನು ನಗುಮೊಗದಿಂದ ಮಾತನಾಡಿಸುತ್ತಿದ್ದ ಅರಾಧೆ ಅವರು ನಾನು ಕಂಡ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಲ್ಲದೆ, ಅವರಿಗೆ ನ್ಯಾಯಾಂಗದ ಉದ್ದೇಶದ ಬಗ್ಗೆ ಬದ್ಧತೆಯಿತ್ತು. ನ್ಯಾಯಾಂಗದ ಆಶಯಗಳ ಈಡೇರಿಕೆಗಾಗಿ ಕಠಿಣ ಪರಿಶ್ರಮ ವಹಿಸಿದ್ದರು. ಅವರು ಮುಂದಿನ ದಿನಗಳಲ್ಲಿಯೂ ತಮ್ಮ ಈ ಸೇವಾಪರತೆಯನ್ನು ಮುಂದುವರಿಸಬೇಕು ಎಂದು ಪ್ರಸನ್ನ ಬಾಲಚಂದ್ರ ವರಾಳೆ ಶುಭ ಹಾರೈಸಿದರು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ನ್ಯಾಯಮೂರ್ತಿ ಅಲೋಕ್ ಅರಾಧೆ, ನಾನು ಬೆಂಗಳೂರಿನಿಂದ ಸುಂದರ ನೆನಪುಗಳೊಂದಿಗೆ ತೆರಳುತ್ತಿದ್ದೇನೆ. ಇಲ್ಲಿನ ವಕೀಲರಿಂದ ಅನೇಕ ವಿಷಯಗಳನ್ನು ಕಲಿತಿದ್ದೇನೆ. ದೇಶದಲ್ಲೇ ಬೆಂಗಳೂರು ವಕೀಲರ ಸಂಘ ಅತ್ಯುತ್ತಮವಾದುದು. ಅಂತೆಯೇ, ಬೆಂಗಳೂರು ಒಂದು ಸುಂದರ ನಗರಿ, ಇಲ್ಲಿನ ಹಿರಿಯ ವಕೀಲರ ಕೌಶಲ್ಯ ಕಂಡು ನಾನು ಬೆರಗಾಗಿದ್ದೇನೆ ಎಂದರು.