ಬೆಂಗಳೂರು: ತಾನು ಆರ್‌ಎಸ್‌ಎಸ್ ಸಂಘಟನೆಯ ಸದಸ್ಯ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತನಾಗಿದ್ದು ಕಟ್ಟಡದ ಲೋಕಾರ್ಪಣೆಗೆ ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿ ಹಣ ಸುಲಿಗೆ ಮಾಡುವುದಕ್ಕೆ ಮುಂದಾಗಿದ್ದಾರೆ ಎಂದು ಎನ್.ಹನುಮೇಗೌಡ ಎಂಬುವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಬಿಜೆಪಿ ಮುಖಂಡ ಬಿ.ಜೆ.ಪುಟ್ಟಸ್ವಾಮಿ ದಾಖಲಿಸಿರುವ ದೂರು ರದ್ದು ಮಾಡಬೇಕು ಎಂದು ಕೋರಿ ಕಾಮಾಕ್ಷಿಪಾಳ್ಯದ ಹನುಮೇಗೌಡ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠ ಅರ್ಜಿಯನ್ನು ಮಾನ್ಯ ಮಾಡಿದೆ. ಅಲ್ಲದೆ, ಹಣ ವಸೂಲು ಮಾಡಲು ಬೆದರಿಸಿದ್ದಾನೆಂದು ಅರ್ಜಿದಾರರ ವಿರುದ್ಧ ಮಾಡಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ತಿಳಿಸಿದೆ.
ಜತೆಗೆ, ಭಾರತೀಯ ಅಪರಾಧ ದಂಡ ಸಂಹಿತೆ ಸೆಕ್ಷನ್ 385ರಡಿ ಅಪರಾಧ ಎಸಗಿದ್ದರೆ ಆತ ಇತರೆ ಯಾವುದೇ ವ್ಯಕ್ತಿಯನ್ನು ಬೆದರಿಸಿ ಘಾಸಿಗೊಳಿಸಿರಬೇಕು. ಆದರೆ ಈ ಪ್ರಕರಣದಲ್ಲಿ ಆರೋಪಪಟ್ಟಿಯ ಜತೆ ಆರೋಪ ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯಧಾರಗಳು ಲಭ್ಯವಾಗಿಲ್ಲ. ಅಲ್ಲದೆ, ದೂರುದಾರರನ್ನು ಸುಲಿಗೆ ಮಾಡಲೆಂದು ಬೆದರಿಸಿರುವುದಕ್ಕೆ ಬಲವಾದ ಸಾಕ್ಷಿಗಳು ಇಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಈ ಪ್ರಕರಣದಲ್ಲಿ ಅರ್ಜಿದಾರರು ದೂರುದಾರರಿಗೆ ಉದ್ದೇಶ ಪೂರ್ವಕವಾಗಿಯೇ ಬೆದರಿಕೆಯೊಡ್ಡಿದ್ದಾರೆ ಎಂಬುದಕ್ಕೆ ಮತ್ತು ಆ ಮೂಲ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದಕ್ಕೂ ಸಾಕ್ಷಿ ಇಲ್ಲ. ಮೇಲ್ನೋಟಕ್ಕೆ ಯಾವುದೇ ಪುರಾವೆ ಕಂಡುಬಂದಿಲ್ಲವಾದ್ದರಿಂದ ಮ್ಯಾಜಿಸ್ಟ್ರೇಜ್ ಕಾಗ್ನಿಜೆನ್ಸ್ ತೆಗೆದುಕೊಂಡು ಐಪಿಸಿ ಸೆಕ್ಷನ್ 384ರಡಿ ಪ್ರಕರಣ ಮುಂದುವರಿಸಿರುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ಇಡೀ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸುತ್ತಿರುವುದಾಗಿ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.