ಬೆಂಗಳೂರು: ಕಿರಿಯ ಸಿವಿಲ್ ಎಂಜಿನಿಯರ್ಗಳಿಗೆ ಪದೋನ್ನತಿ ನೀಡಿ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಗಳಲ್ಲಿ ಶೇ.25ರಷ್ಟು ಹುದ್ದೆಗಳನ್ನು ಭರ್ತಿ ಮಾಡುವುದಕ್ಕಾಗಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಸರ್ಕಾರ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಎಂ.ಆರ್.ರಂಗರಾಮು ಸೇರಿ ರಾಜ್ಯದ ವಿವಿಧ ನಗರಸಭೆ ಮತ್ತು ನಾಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 7 ಮಂದಿ ಸಹಾಯಕ ಸಿವಿಲ್ ಎಂಜಿನಿಯರ್ಗಳು ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ನಡೆಸಿದರು.
'ಅಧಿಸೂಚನೆ ಅಸಾಂವಿಧಾನಿಕ':ಕಿರಿಯ ಸಿವಿಲ್ ಎಂಜಿನಿಯರ್ಗಳಿಗೆ ಬಡ್ತಿ ನೀಡಿ ಸಹಾಯಕ ಕಾರ್ಯಕಾರಿ ಎಂಜಿನಿಯರ್ಗಳ ಹುದ್ದೆ ಭರ್ತಿ ಮಾಡಲು ಅವಕಾಶವಾಗುವಂತೆ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ (ಅಧಿಕಾರಿಗಳ ಮತ್ತು ಸಿಬ್ಬಂದಿ ಸಾಮಾನ್ಯ ನೇಮಕಾತಿ) ಅಧಿನಿಯಮಗಳು-2011ರ ಶೆಡ್ಯೂಲ್-3ಕ್ಕೆ ಮಾರ್ಪಾಡು ಮಾಡಿ ಸರ್ಕಾರವು 2011ರ ಏ.11ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯು ಅಸಾಂವಿಧಾನಿಕ ಹಾಗೂ ಸಂವಿಧಾನದ ಪರಿಚ್ಛೇದ 14 (ಸಮಾನತೆ) ಮತ್ತು 16ರ (ಸಮಾನ ಅವಕಾಶ) ಸ್ಪಷ್ಟ ಉಲ್ಲಂಘನೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಗೆ ಫೀಡರ್/ಕೆಳ ಶ್ರೇಣಿಯ ಅಧಿಕಾರಿಗಳು ಅಂದರೆ ಸಹಾಯಕ ಎಂಜಿನಿಯರ್ಗಳಿಗೆ ಬಡ್ತಿ ನೀಡಿ ಹುದ್ದೆಯನ್ನು ಭರ್ತಿ ಮಾಡಬೇಕು. ಈ ಪ್ರಕ್ರಿಯೆಯನ್ನು ಆದೇಶ ಪ್ರತಿ ದೊರೆತ 8 ವಾರಗಳೊಳಗೆ ಪೂರ್ಣಗೊಳಿಸಬೇಕು ಎಂದು ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿತು.
ಇದನ್ನೂ ಓದಿ:ಸೌಲಭ್ಯ ಕಲ್ಪಿಸದ ರೈಲ್ವೆ ಸಿಬ್ಬಂದಿ.. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳಿಗೆ ನೋಟಿಸ್ ಕೊಟ್ಟ ನ್ಯಾಯಮೂರ್ತಿಗಳು